ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಪ್ರತಿನಿತ್ಯ 30ಕ್ಕೂ ಹೆಚ್ಚು ಖರ್ಜೂರದ ಮರಗಳನ್ನು ಹತ್ತಿ, ನೀರಾ ಸಂಗ್ರಹಿಸುವ ಮೂಲಕ ಜೀವನಾಧಾರ ಕಂಡುಕೊಂಡಿದ್ದಾರೆ ತೆಲಂಗಾಳದ ಈ ಮಹಿಳೆ.
ತೆಲಂಗಾಳದ ಮೇಡಕ್ ಜಿಲ್ಲೆಯ ರೆಗೋಡೆ ಗ್ರಾಮದ 33 ವರ್ಷದ ಸಾವಿತ್ರಿ, 2016ರಲ್ಲಿ ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಸಾವಿತ್ರಿ ಎರಡನೇ ಮಗುವಿಗೆ ಗರ್ಭ ಧರಿಸಿದ್ದ ವೇಳೆ ಅವರ ಪತಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.
ಪತಿ ತೀರಿಕೊಂಡ ಬಳಿಕ ಕುಟುಂಬದ ನಿರ್ವಹಣೆಗಾಗಿ ನೀರಾ ಸಂಗ್ರಹಣೆ ಮಾಡುವ ವೃತ್ತಿ ಆಯ್ದುಕೊಂಡಿದ್ದಾರೆ. ಪ್ರತಿನಿತ್ಯ 30 ಮರಗಳನ್ನು ಏರುವ ಸಾವಿತ್ರಿ, ಏನಿಲ್ಲವೆಂದರೂ 10 ಕಿಮೀ ನಡೆದು ನೀರಾ ಸಂಗ್ರಹಣೆ ಮಾಡಿ ತಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸುತ್ತಿದ್ದಾರೆ.
10 ನೇ ತರಗತಿಯವರೆಗೆ ಓದಿರುವ ಸಾವಿತ್ರಿಯವರಿಗೆ ಬೇರೆ ಉದ್ಯೋಗಾವಕಾಶಗಳು ಬಂದರೂ, ಅವರು ಪತಿಯ ಹಾದಿಯಲ್ಲೇ ಸಾಗಿ, ನೀರಾ ಸಂಗ್ರಹಿಸುವ ವೃತ್ತಿಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.