ಹೊಸ ದಿಗಂತ ವರದಿ, ಮಂಗಳೂರು:
ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕಿರುಷಷ್ಠಿ ರಥೋತ್ಸವ ದೇವಳದ ರಾಜಾಂಗಣದಲ್ಲಿ ನಡೆಯಿತು.
ಬೆಳಗ್ಗೆ ಶ್ರೀ ಅನಂತ ಪದ್ಮನಾಭ ದೇವರಿಗೆ ಉಷಾಃಕಾಲ ಪೂಜೆ ಜರುಗಿ ಪಂಚಾಮೃತ ಅಭಿಷೇಕ, ಹರಿವಾಣ ನೈವೇದ್ಯ ಸೇವೆಯಾಗಿ ಶ್ರೀ ಅನಂತಪದ್ಮನಾಭ ದೇವರಿಗೆ ಷಷ್ಠಿಯ ಮಹಾಪೂಜೆ ನೆರವೇರಿತು.
ಮಧ್ಯಾಹ್ನ ಶ್ರೀ ದೇವರ ಬಲಿ ಹೊರಟು ರಥಾರೋಹಣ ಜರುಗಿ, ವೈಭವದ ರಥೋತ್ಸವ ನಡೆಯಿತು. ಐದು ಸಾವಿರಕ್ಕೂ ಅಧಿಕ ಮಂದಿ ದೇವರ ಅನ್ನಪ್ರಸಾದ ಸ್ವೀಕರಿಸಿದರು. ಭಕ್ತರಿಂದ ನಾಗತಂಬಿಲ, ಪಂಚಾಮೃತ ಅಭಿಷೇಕ, ಸೇವೆಗಳು ಜರಗಿದವು. ರಾತ್ರಿ ಶ್ರೀ ದೇವರ ಬಲಿ ಹೊರಟು ಚೆಂಡೆ ಸುತ್ತು, ರಥಾರೋಹಣ, ರಥೋತ್ಸವ, ಪಾಲಕಿ ಉತ್ಸವ ಜರಗಿತು. ಹತ್ತು ಸಾವಿರಕ್ಕೂ ಅಧಿಕ ಮಂದಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ, ಆನುವಂಶಿಕ ಆಡಳಿತ ಮೊಕ್ತೇಸರ ಕೆ. ನರಸಿಂಹ ತಂತ್ರಿ, ಆನುವಂಶಿಕ ಮೊಕ್ತೇಸರ ಬಾಲಕೃಷ್ಣ ಕಾರಂತ, ಮೊಕ್ತೇಸರರಾದ ಭಾಸ್ಕರ ಕೆ., ಮನೋಹರ ಭಟ್ ಉಪಸ್ಥಿತರಿದ್ದರು.