spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, October 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತ ಪರಿಸರ ಸೂಕ್ಷ್ಮ ವಲಯದ ಗಡಿ ಸೀಮಿತಗೊಳಿಸಿ ಅಧಿಸೂಚನೆ

- Advertisement -Nitte

ಉಡುಪಿ: ಭಾರತ ಸರಕಾರದ ಅರಣ್ಯ, ಪರಿಸರ ಸಚಿವಾಲಯವು ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ 3ರಂತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುತ್ತ ಪರಿಸರ ಸೂಕ್ಷ್ಮ ವಲಯದ ಗಡಿ ಗುರುತಿಸಿ ಅಧಿಸೂಚನೆ ಹೊರಡಿಸಲಾಗಿದೆ. ಕರಡು ಆದೇಶದಲ್ಲಿದ್ದ 10 ಕಿ.ಮೀ. ಬದಲಾಗಿ, ಉದ್ಯಾನವನದ ಗಡಿಯಿಂದ ಕೇವಲ 1 ಕಿ.ಮೀ.ಗೆ ಸೀಮಿತಗೊಳಿಸಲಾಗಿದೆ.
ಪರಿಸರ ಸೂಕ್ಷ್ಮ ವಲಯವನ್ನು ಕಂದಾಯ, ಅರಣ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಾಭಿವೃದ್ಧಿ, ಪರಿಸರ ವಿಜ್ಞಾನದಲ್ಲಿ ಪರಿಣಿತರು, ಎನ್‌ಜಿಒ ಮತ್ತು ಮೂಡಿಗೆರೆ, ಕಾರ್ಕಳ, ಬೆಳ್ತಂಗಡಿ ಮತ್ತು ಶೃಂಗೇರಿ ಕ್ಷೇತ್ರಗಳ ಶಾಸಕರನ್ನು ಒಳಗೊಂಡ ಸಮಿತಿಯಿಂದ ಜನಸಾಮಾನ್ಯರೊಂದಿಗೆ ಚರ್ಚಿಸಿ ಝೋನಲ್ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿ ನಿರ್ವಹಣೆ ಮಾಡಲಾಗುತ್ತದೆ.
ಮೂಲಭೂತ ಸೌಕರ್ಯಗಳಿಗಿಲ್ಲ ನಿರ್ಬಂಧ ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಯಲ್ಲಿ ಸಾರ್ವಜನಿಕ ಮೂಲ ಸೌಕರ್ಯ ಹಾಗೂ ಸೌಲಭ್ಯಗಳಾದ ವಿದ್ಯುತ್ ಮಾರ್ಗಗಳು, ಕುಡಿಯುವ ನೀರಿನ ಪೈಪ್‌ಲೈನ್‌ಗಳು, ರಸ್ತೆಗಳು, ಸೇತುವೆಗಳು ಪರಿಸರ ಸೂಕ್ಷ್ಮ ವಲಯದ ನಿಷೇಧಿತ ಚಟುವಟಿಕೆಗಳಾಗಿರುವುದಿಲ್ಲ. ಅಲ್ಲದೇ ಸ್ಥಳೀಯ ಸಮುದಾಯಗಳಿಂದ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೂ ಯಾವುದೇ ನಿಷೇಧವನ್ನು ಹೇರಿಲ್ಲ.
ಇವುಗಳೆಲ್ಲ ನಿಷೇಧಿತ ಚಟುವಟಿಕೆಗಳಾಗಿವೆ
ವಾಣಿಜ್ಯ ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಹೊಸ ಸಾ-ಮಿಲ್ಲು, ಮಾಲಿನ್ಯಕಾರಕ ಕೈಗಾರಿಕೆಗಳನ್ನು ಸ್ಥಾಪಿಸುವುದು, ನಿರ್ವಹಿಸುವುದು ಮತ್ತು ಅಪಾಯಕಾರಿ ವಸ್ತುಗಳನ್ನು ನಿರ್ವಹಿಸುವುದು, ಪ್ರಮುಖ ಜಲವಿದ್ಯುತ್ ಸ್ಥಾವರಗಳ ಸ್ಥಾಪನೆಗಳಂತಹ ದೊಡ್ಡ ಪ್ರಮಾಣ ಕೈಗಾರಿಕಾ ಚಟುವಟಿಕೆಗಳು ಮಾತ್ರ ಈ ಪರಿಸರ ಸೂಕ್ಷ್ಮ ವಲಯದೊಳಗಿನ ಚಟುವಟಿಕೆಗಳ ನಿಷೇಧಿತ ಪಟ್ಟಿಯಲ್ಲಿ ಸೇರಿವೆ.
ಭೂ ಮಾಲೀಕತ್ವ ಬದಲಾವಣೆ- ಸ್ಥಳಾಂತರವಿಲ್ಲ
ಸ್ಥಳೀಯ ಸಮುದಾಯಗಳು ತಮ್ಮ ಅಮೂಲ್ಯವಾದ ನೀರಿನ ಮೂಲಗಳನ್ನು ರಕ್ಷಿಸುವಲ್ಲಿ ಪರಿಸರ ಸೂಕ್ಷ್ಮ ವಲಯ ಸಹಕಾರಿಯಾಗಿದೆ. ಮಾನವ ಪ್ರಚೋದಿತ ಭೂಕುಸಿತಗಳಿಂದ ರಕ್ಷಣೆ, ವಾಯು ಮಾಲಿನ್ಯ, ನೀರು ಮತ್ತು ಮಣ್ಣಿನ ಮಾಲಿನ್ಯವನ್ನು ತಪ್ಪಿಸಿ ಜನಸಾಮಾನ್ಯರ ಉತ್ತಮ ಜೀವನಕ್ಕೆ ಇದು ಸಹಾಯಕವಾಗಿದೆ. ಪರಿಸರ ಸೂಕ್ಷ್ಮ ವಲಯದ ಘೋಷಣೆಯು ಭೂಮಿಯ ಮಾಲೀಕತ್ವವನ್ನು ಬದಲಾಯಿಸುವುದಿಲ್ಲ. ಕಂದಾಯ ಮತ್ತು ಪಟ್ಟಾ ಜಮೀನುಗಳು ಯಥಾಸ್ಥಿತಿ ಇರುತ್ತವೆ. ವಲಯದೊಳಗೆ ವಾಸಿಸುವ ಜನರನ್ನು ಸ್ಥಳಾಂತರಿಸುವುದಿಲ್ಲ. ಅಲ್ಲಿಯೇ ವಾಸಿಸಿ, ತಮ್ಮ ನಿಯಮಿತ ಚಟುವಟಿಕೆಗಳನ್ನು ನಿರ್ವಹಿಸಬಹುದಾಗಿದೆ.
ನೈಸರ್ಗಿಕ ಓವರ್‌ಹೆಡ್ ವಾಟರ್ ಟ್ಯಾಂಕ್
ಕುದುರೆಮುಖ ರಾಷ್ಟ್ರೀಯ ಉದ್ಯಾನವನವು ಪಶ್ಚಿಮ ಘಟ್ಟಗಳ ಹೃದಯಭಾಗದಲ್ಲಿರುವ ‘ಯುನೆಸ್ಕೋ‘ ಮಾನ್ಯತೆ ಪಡೆದ ವಿಶ್ವ ನೈಸರ್ಗಿಕ ಪರಂಪರೆಯ ತಾಣವಾಗಿದೆ. ಇದು ಅನೇಕ ಅಳಿವಿನ ಅಂಚಿನಲ್ಲಿರುವ ಮತ್ತು ಅಪೂರ್ವ ಪ್ರಾಣಿಗಳ ಆವಾಸ ಸ್ಥಾನವಾಗಿದೆ. ಸಿಂಹ ಬಾಲದ ಕೋತಿ, ಮಲಬಾರ್ ಡ್ಯಾನ್ಸಿಂಗ್ ಕಪ್ಪೆಗಳು, ಅನೇಕ ಸ್ಥಳೀಯ ಆರ್ಕಿಡ್‌ಗಳು ಮತ್ತು ಇತರೆ ಸ್ಥಳೀಯ ಸಸ್ಯವರ್ಗಗಳ ಸಹಿತ ಅನೇಕ ಅಪೂರ್ವ ಮತ್ತು ಅಳಿವಿನಂಚಿನಲ್ಲಿರುವ ಪ್ರಬೇಧಗಳಿಗೆ ನೆಲೆಯಾಗಿದೆ. ಅಲ್ಲದೇ ತುಂಗಾ, ಭದ್ರಾ ಮತ್ತು ನೇತ್ರಾವತಿಯಂತಹ ಪ್ರಮುಖ ನದಿಗಳ ಮೂಲವಾಗಿದೆ. ಇದು ವ್ಯಾಪಕವಾದ ಶೋಲಾ ಹುಲ್ಲುಗಾವಲುಗಳಿಗೆ ಹೆಸರುವಾಸಿಯಾಗಿದೆ. ನೀರಿನ ಸಂರಕ್ಷಣೆಯಲ್ಲಿ ರಾಷ್ಟ್ರೀಯ ಉದ್ಯಾನವನದ ಪಾತ್ರದಿಂದಾಗಿ ಇದನ್ನು ನೈಸರ್ಗಿಕ ಓವರ್‌ಹೆಡ್ ವಾಟರ್ ಟ್ಯಾಂಕ್ ಎಂದು ಕರೆಯಲಾಗುತ್ತಿದೆ.
ಸೂಕ್ಷ್ಮ ಪರಿಸರವನ್ನು ರಕ್ಷಿಸಲು ಈ ವಲಯ
ಸಂರಕ್ಷಿತ ಪ್ರದೇಶಗಳಿಗೆ ಕೆಲವು ರೀತಿಯ ಗಂಭೀರ ತೊಂದರೆಗಳು ಉಂಟಾಗುವುದನ್ನು ತಪ್ಪಿಸಲು ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳ ಸುತ್ತ ಪರಿಸರ ಸೂಕ್ಷ್ಮ ವಲಯಗಳೆಂದು ಘೋಷಿಸಲಾಗಿದೆ. ಇವುಗಳು ಮನುಷ್ಯ – ವನ್ಯಪ್ರಾಣಿಗಳ ಸಂಘರ್ಷ ತಗ್ಗಿಸುವಿಕೆಗೆ ಸಹಾಯ ಮಾಡುವ ಪ್ರದೇಶಗಳಿಗೆ ಪರಿವರ್ತನಾ ವಲಯವಾಗಿ ಕಾರ್ಯ ನಿರ್ವಹಿಸುತ್ತವೆ. ಪರಿಸರ ದುರ್ಬಲವಾಗಿರುವ ಪ್ರದೇಶಗಳನ್ನು ವಿವೇಚನೆಯಿಲ್ಲದ ಕೈಗಾರಿಕೀಕರಣದಿಂದ ರಕ್ಷಿಸುವ ಪ್ರಯತ್ನವಾಗಿದೆ. ಸ್ಥಳೀಯ ಸಮುದಾಯಗಳ ಚಟುವಟಿಕೆಗಳಿಗೆ ವಿರುದ್ಧವಾಗಿ ಅಲ್ಲ ಎಂದು ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುತ್ರನ್ ಅವರು ತಿಳಿಸಿದ್ದಾರೆ.
ಸ್ಥಳೀಯ ಸಾರ್ವಜನಿಕರೊಂದಿಗೆ ಚರ್ಚಿಸಿ ರಾಜ್ಯ ಸರಕಾರವು ಸಿದ್ಧಪಡಿಸಿರುವ ವಲಯ ಮಾಸ್ಟರ್ ಯೋಜನೆ, ಮತ್ತು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಯನ್ನು ರಾಷ್ಟ್ರೀಯ ಉದ್ಯಾನವನದ ಹೊರಗೆ ಅಗತ್ಯವಿರುವ ಕನಿಷ್ಠ ಪ್ರದೇಶಕ್ಕೆ ಮಿತಿಗೊಳಿಸಿ ನಿರ್ವಹಣೆ ಮಾಡಲು ಈ ಅಧಿಸೂಚನೆ ಹೊರಡಿಸಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss