ಕುಮಟಾ : ತಾಲೂಕಿನ ಮೂರೂರಿನ ಕೋಣಾರೆಯ ವಿಷ್ಣು ಮೂರ್ತಿ ದೇವಾಲಯದಲ್ಲಿ ಶನಿವಾರ ರಾತ್ರಿ ಕಳ್ಳರು ಸುಮಾರು ೭.೭ ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣ ಮತ್ತು ನಗದು ಹಣವನ್ನು ಕಳುವು ಮಾಡಿದ್ದಾರೆ.
ಮಧ್ಯರಾತ್ರಿಯ ಅವಧಿಯಲ್ಲಿ ದೇವಾಲಯದ ಪ್ರಧಾನ ಬಾಗಿಲನ್ನು ಮುರಿದು ಒಳ ನುಗ್ಗಿ ದೇವಾಲಯದ ಗರ್ಭಗುಡಿಯ ಒಳಗಡೆ ಪೆಟ್ಟಿಗೆಯಲ್ಲಿರುವ ದೇವರ ಬೆಳ್ಳಿಯ ಪ್ರಭಾವಳಿ ,ವಿವಿಧ ಬೆಳ್ಳಿಯ ಆಭರಣಗಳನ್ನು ಕದ್ದಿದ್ದಾರೆ.ದೇವಾಲಯದಲ್ಲಿ ಇರುವ ಒಂದು ಕಾಣಿಕೆ ಹುಂಡಿಯನ್ನು ಒಡೆದು ಅಂದಾಜು ೨೦ ಸಾವಿರ ರೂ. ನಗದನ್ನು ಒಯ್ದಿರಬಹುದೆಂದು ಅಂದಾಜಿಸಲಾಗಿದೆ.
ದೇವಾಲಯದ ಮತ್ತೊಂದು ಕಾಣಿಕೆ ಹುಂಡಿಯನ್ನು ಒಡೆಯುವಾಗ ದೇವಾಲಯಕ್ಕೆ ಹೊಂದಿರುವ ಕೊಠಡಿಯಲ್ಲಿರುವ ಅರ್ಚಕರಿಗೆ ತಿಳಿದು ಬಂದು ತಕ್ಷಣ ದೊಡ್ಡದಾಗಿ ಕೂಗಲು ಆರಂಭಿಸಿದಾಗ ಕಳ್ಳರು ಓಡಿಹೋಗಿದ್ದಾರೆ.ಈ ಕುರಿತು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಗಣಪತಿ ಹೆಗಡೆ ಪೊಲೀಸ್ ದೂರನ್ನು ನೀಡಿದ್ದಾರೆ.
ಭಾನುವಾರ ಶ್ವಾನ ದಳವನ್ನು, ಬೆರಳಚ್ಚು ತಜ್ಞರನ್ನು ಕರೆಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶೀಘ್ರದಲ್ಲಿಯೇ ಕಳ್ಳರನ್ನು ಹಿಡಿಯುವ ವಿಶ್ವಾಸವನ್ನು ಪಿ.ಎಸ್.ಐ ಆನಂದ ಮೂರ್ತಿ ವ್ಯಕ್ತಪಡಿಸಿದ್ದಾರೆ.