ಹೊಸದಿಗಂತ ವರದಿ,ಹಾವೇರಿ:
ಬೆಂಗಳೂರಿನಲ್ಲಿ ಫೆ.7ರಂದು ಜರುಗಲಿರುವ ಎಸ್.ಟಿ ಮೀಸಲಾತಿ ಹೋರಾಟ ಸಮಾವೇಶದಂದು ಲಕ್ಷಾಂತರ ಜನ ಬರುವ ನಿರೀಕ್ಷೆಯಿದೆ ಆದ್ದರಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡುವಂತೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ರವಿವಾರ ಸಚಿವ ಬೊಮ್ಮಾಯಿ ಅವರು ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರನ್ನು ಕಾಗಿನೆಲೆ ಕನಕಗುರು ಪೀಠದಲ್ಲಿ ಭೇಟಿ ಆದ ಸಮಯದಲ್ಲಿ ಶ್ರೀಗಳು ಗೃಹ ಸಚಿವರಿಗೆ ಮನವಿಯನ್ನು ಅರ್ಪಿಸಿದರು.
ಕಾಗಿನೆಲೆ ಕನಕ ಮಹಾಸಂಸ್ಥಾನ, ಎಸ್.ಟಿ ಮೀಸಲಾತಿ ಹೋರಾಟ ಸಮಿತಿ ಮತ್ತು ಕರ್ನಾಟಕ ಪ್ರದೇಶ ಕುರಬರ ಸಂಘ ಇವರ ನೇತೃತ್ವದಲ್ಲಿ ಇದೇ ಜ.೧೫ ರಂದು ಶ್ರೀ ಕ್ಷೇತ್ರ ಕಾಗಿನೆಲೆಯಿಂದ-ಬೆಂಗಳೂರವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಂದು ಜರುಗಲಿರುವ ಬೃಹತ್ ಸಮಾವೇಶದಲ್ಲಿ ರಾಜ್ಯದ ಅನೇಕ ಸಾಧು-ಸಂತರು, ರಾಜಕೀಯ ನಾಯಕರು ಮತ್ತು ಸಮುದಾಯದ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಹಾಗಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿಕೊಡಬೇಕು ಎಂದು ಹೇಳಿದರು.
ಶ್ರೀಗಳ ಮನವಿಗೆ ಸ್ಪಂದಿಸಿರುವ ಗೃಹ ಸಚಿವರು ಸೂಕ್ತ ಪೊಲೀಸ್ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.