Tuesday, August 16, 2022

Latest Posts

ಕುರಬ ಸಮುದಾಯವನ್ನು ಎಸ್ಟಿ ಪಟ್ಟಿ ಸೇರ್ಪಡೆಗೆ ಹೋರಾಟ: ನಾಳೆ ಪಾದಯಾತ್ರೆಗೆ ನಿರಂಜನಾನಂದಪುರಿ ಶ್ರೀ ಚಾಲನೆ

ಹೊಸ ದಿಗಂತ ವರದಿ ಹಾವೇರಿ:

ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿಗೆ ಸೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ಒತ್ತಾಯಿಸುವುದಕ್ಕೆ ಕಾಗಿನೆಲೆಯಿಂದ ಬೆಂಗಳೂರಿನವರೆಗೆ ಆಯೋಜಿಸಿರುವ ಪಾದ ಯಾತ್ರೆಗೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕಗುರುಪೀಠದಲ್ಲಿ ಇದೇ ಜ.15ರಂದು ಕನಕಗುರು ಪೀಠದ ನಿರಂಜನಾನಂದಪುರಿ ಶ್ರೀ ಚಾಲನೆ ನೀಡಲಿದ್ದಾರೆ.

ಕುರುಬ ಸಮುದಾಯವನ್ನು ಎಸ್.ಟಿ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಇಗಾಗಲೇ ರಾಜ್ಯಾದ್ಯಂತ ಅನೇಕ ಹೋರಾಟಗಳನ್ನು ರೂಪಿಸಿ ಯಶಸ್ವಿಗೊಳಿಸಲಾಗಿದ್ದು, ಶುಕ್ರವಾರ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಕಾಗಿನೆಲೆಯಿಂದ – ಬೆಂಗಳೂರಿಗೆ ಬೃಹತ್ ಪಾದಯಾತ್ರೆಯನ್ನು ಆಯೋಜಿಸಲಾಗಿದೆ. ಈ ಪಾದಯಾತ್ರೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದು ಎಸ್.ಟಿ ಹೋರಾಟ ಸಮಿತಿಯ ಸದಸ್ಯ ರಾಜೇಂದ್ರ ಹಾವೇರಣ್ಣನವರ ತಿಳಿಸಿದ್ದಾರೆ.

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ರಾಜ್ಯ ಎಸ್.ಟಿ ಮೀಸಲಾತಿ ಹೋರಾಟ ಸಮಿತಿ, ಕರ್ನಾಟಕ ಪ್ರದೇಶ ಕುರುಬರ ಸಂಘ ಇವುಗಳ ನೇತೃತ್ವ ಹಾಗೂ ಸಮಾಜದ ಮುಂಚೂಣಿ ಸಂಘಟನೆಗಳ ಮತ್ತು ಸಮಾಜ ಬಂಧುಗಳ ಸಮ್ಮುಖದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಜರುಗಲಿದೆ. 3 ಗಂಟೆಗೆ ಪಾದಯಾತ್ರೆ ಕಾಗಿನೆಲೆಯಿಂದ ಹೊರಡಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ನಾಲ್ಕು ಶಾಖಾ ಮಠದ ಶ್ರೀಗಳು ಹಾಗೂ ನೂತನವಾಗಿ ಸಚಿವರಾಗಿರುವ ಆರ್.ಶಂಕರ್, ಎಂ.ಟಿ.ಬಿ ನಾಗರಾಜ, ಪಂಚಾಯತ್ ರಾಜ್ಯ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವರಾದ ಎಚ್.ಎಂ ರೇವಣ್ಣ, ಎಚ್. ವಿಶ್ವನಾಥ್ ಲೋಕಸೇವಾ ಆಯೋಗದ ಮಾಜಿ ಸದಸ್ಯ ಕೆ.ಮುಕಡಪ್ಪ, ಮಾಜಿ ಸಂಸದ ವಿರುಪಾಕ್ಷಪ್ಪ ಸೇರಿದಂತೆ ಸಮಾಜದ ಗಣ್ಯರು, ಹಿರಿಯರು ಈ ಪಾದಯಾತ್ರೆಯಲ್ಲಿ ಬಾಗವಹಿಸಲಿದ್ದು ಜಿಲ್ಲೆಯ ಕುರುಬ ಸಮಾಜದ ಜನಪತ್ರಿನಿಧಿಗಳು ಸಮಾಜ ಬಂಧುಗಳು ಈ ಕಾರ್ಯಕ್ರಮಕ್ಕೆ ತಪ್ಪದೇ ಭಾಗವಹಿಸಬೇಕೆಂದು ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಹರಿಹರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಗೌಡ ಗಾಜೀಗೌಡ್ರ ಮನವಿ ಮಾಡಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss