Wednesday, June 29, 2022

Latest Posts

ಕುರುಬ ಸಮಾಜದ ಹೋರಾಟದ ಹಿಂದೆ ಆರೆಸ್ಸೆಸ್ ಕೈವಾಡವಿಲ್ಲ: ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸ್ಪಷ್ಟನೆ

ಹೊಸ ದಿಗಂತ ವರದಿ, ದಾವಣಗೆರೆ

ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಪಡೆದೇ ಎಸ್ಟಿ ಹೋರಾಟ ನಡೆಸಲಾಗುತ್ತಿದೆ. ಕುರುಬ ಸಮಾಜದ ಹೋರಾಟದ ಹಿಂದೆ ಆರೆಸ್ಸೆಸ್ ಕೈವಾಡವಿಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸ್ಪಷ್ಟಪಡಿಸಿದ್ದಾರೆ.
ನಗರದ ಶ್ರೀ ಬೀರಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲು ದೆಹಲಿಗೆ ತೆರಳಿದ್ದಾಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ರನ್ನು ಭೇಟಿ ಮಾಡಿದ್ದು ನಿಜ. ಆದರೆ, ಆರೆಸ್ಸೆಸ್ನ ಸಂತೋಷ್ರನ್ನು ಭೇಟಿ ಮಾಡಿಲ್ಲ. ನಮಗೆ ಬೇಕಾಗಿರುವುದು ಎಸ್ಟಿ ಮೀಸಲಾತಿ. ಯಾರೇ ಅದನ್ನು ಕೊಟ್ಟರೂ ಅಂತಹವರನ್ನು ಸಮಾಜ ಸ್ವಾಗತಿಸುತ್ತದೆ ಎಂದರು.
ಸಮಾಜದ ನಾಯಕರಾದ ಸಿದ್ದರಾಮಯ್ಯ ಎಸ್ಟಿ ಹೋರಾಟಕ್ಕೆ ಯಾವಾಗ ಬೇಕಾದರೂ ಬರಬಹುದು. ಸಿದ್ದರಾಮಯ್ಯ ಅಹಿಂದ ವರ್ಗಗಳ ನಾಯಕ, ಮೇಲಾಗಿ ಕುರುಬ ಸಮಾಜದ ನಾಯಕ. ಎಂದಿಗೂ ಸಿದ್ದರಾಮಯ್ಯ ವರ್ಚಸ್ಸು ಕುಗ್ಗುವುದಿಲ್ಲ. ಕುರುಬರ ಎಸ್ಟಿ ಮೀಸಲಾತಿ ಬೇಡಿಕೆ ಹೋರಾಟಕ್ಕೆ ಮೊದಲು ಅಭಿಪ್ರಾಯ ಕೇಳಿದ್ದೇ ಸಿದ್ದರಾಮಯ್ಯ ಬಳಿ. ಈ ಬಗ್ಗೆ 2 ಗಂಟೆ ಕಾಲ ಸಿದ್ದರಾಮಯ್ಯ ಜೊತೆ ಚರ್ಚಿಸಿ, ಅವರ ಒಪ್ಪಿಗೆ ಪಡೆದ ನಂತರವೇ ನಾವು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪರನ್ನು ಭೇಟಿಯಾಗಿದ್ದು. ನೀವು ಹೋರಾಟ ಮಾಡಿ, ನನ್ನ ಬೆಂಬಲವಿಯೆಂದು ಆಗ ಸ್ವತಃ ಸಿದ್ದರಾಮಯ್ಯ ಹೇಳಿದ್ದರು ಎಂದು ಸ್ವಾಮೀಜಿ ಪ್ರತಿಕ್ರಿಯಿಸಿದರು.
ಹೊಸದುರ್ಗ ಶಾಖಾಮಠದ ಶ್ರೀ ಈಶ್ವರನಾಂದಪುರಿ ಸ್ವಾಮೀಜಿ ಮಾತನಾಡಿ, ಕುರುಬರ ಎಸ್ಟಿ ಹೋರಾಟವು ಸಮಾಜದ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟ. ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಎಲ್ಲರೂ ಈ ಹೋರಾಟದಲ್ಲಿ ಭಾಗಿಯಾಗಿದ್ದೇವೆ. ನಮ್ಮ ಹಕ್ಕುಗಳನ್ನು ಕೇಳುವುದಕ್ಕಾಗಿ ನಡೆಯುವ ಹೋರಾಟ ಇದಾಗಿದ್ದು, ಯಾರಿಂದಲೂ ಪ್ರೇರಿತವಾದ ಹೋರಾಟ ಇದಲ್ಲ. ಯಾರು ಬಂದರೂ, ಬರದಿದ್ದರೂ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಸಿಗಬೇಕೆಂಬ ಹೋರಾಟ ನಡೆದೇ ನಡೆಯುತ್ತದೆ ಎಂದರು.
ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಜ.15ರಿಂದ ಫೆ.7ರವರೆಗೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳಲಾಗುವುದು. 340 ಕಿ.ಮೀ. ಪಾದಯಾತ್ರೆಯಲ್ಲಿ ಸ್ವಾಮಿಗಳ ಜೊತೆಗೆ ಇಡೀ ಸಮಾಜ ಭಾಗವಹಿಸಲಿದೆ. ನಮ್ಮ ಕೂಗು ದೆಹಲಿಗೆ ಮುಟ್ಟುವವರೆಗೂ ಹೋರಾಟ ಇರಲಿದೆ. ಕುರುಬರಿಗೆ ಎಸ್ಟಿ ಮೀಸಲಾತಿ ಸಿಗಬೇಕೆಂಬ ಹೋರಾಟಕ್ಕೆ ಸಮಾಜ ಬಾಂಧವರೂ ಸ್ವಯಂಪ್ರೇರಣೆಯಿಂದ ಭಾಗವಹಿಸಬೇಕು ಎಂದು ಅವರು ಕರೆ ನೀಡಿದರು.
ಪೂರ್ವಭಾವಿ ಸಭೆಯಲ್ಲಿ ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ, ಜಿಲ್ಲಾ ಪಂಚಾಯತ್ ಸದಸ್ಯ ಹದಡಿ ನಿಂಗಪ್ಪ, ನಿವೃತ್ತ ಸಿಪಿಐ ಆರ್.ದೇವೇಂದ್ರಪ್ಪ ಕುಣಿಬೆಳಕೆರೆ ಮತ್ತಿತರರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss