ಹೊಸ ದಿಗಂತ ವರದಿ, ಶಿವಮೊಗ್ಗ:
ಕುವೆಂಪು ವಿಶ್ವವಿದ್ಯಾನಿಲಯ ಆಡಳಿತ ಮಂಡಳಿಯು ಸ್ನಾತಕೋತ್ತರ ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶ ಶುಲ್ಕದಲ್ಲಿ ಸುಲಿಗೆ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಕುವೆಂಪು ವಿವಿ ಆಡಳಿತ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ದೂರದೂರಿನಿಂದ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದ್ದರೂ ಅದರ ಪ್ರವೇಶ ಶುಲ್ಕ ಬಡ ಮತ್ತು ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಹೊರೆಯಾಗಿ ಪರಿಣಿಮಿಸಿದೆ. ವಿದ್ಯಾರ್ಥಿನಿಲಯವು ಕುವೆಂಪು ವಿವಿಯ ಅನುದಾನಕ್ಕೆ ಒಳಪಟ್ಟಿದ್ದರೂ ಅದೊಂದು ಖಾಸಗಿ ವಿದ್ಯಾರ್ಥಿ ನಿಲಯದಂತೆ ದುಬಾರಿ ಶುಲ್ಕ ವಸೂಲಿ ಮಾಡುತ್ತಿದೆ ಎಂದು ದೂರಿದರು.
ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕ ಮುಂಗಡ ಡಿಫಾಸಿಟ್ ಹೆಸರಿನಲ್ಲಿ 8500ರೂ.ಗಳಿಂದ 9080 ರೂ.ಗಳ ವರೆಗೆ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಪ್ರತಿ ತಿಂಗಳು ಊಟದ ಖರ್ಚು ಮತ್ತು ವಿದ್ಯುತ್ ಬಿಲ್ ನ್ನು ವಿದ್ಯಾರ್ಥಿಗಳಿಂದಲೆ ಪಡೆಯಲಾಗುತ್ತದೆ. ಡಿಫಾಸಿಟ್ ನಲ್ಲಿ, ನಿಲಯದ ಅಭಿವೃದ್ದಿ ಶುಲ್ಕ, ಕೊಠಡಿ ಬಾಡಿಗೆ ಶುಲ್ಕ , ನೌಕರರ ಕಲ್ಯಾಣ ನಿಧಿ ಮತ್ತು ಮಿಸಲೇನಿಯಸ್ ಹೆಸರಿನಲ್ಲಿ ಹಣವನ್ನು ಕಡಿತಗೊಳಿಸಲಾಗುತ್ತಿದೆ. 8000 ರೂ. ಕ್ಕೂ ಹೆಚ್ಚಿನ ಡಿಫಾಸಿಟ್ ಹಣದಲ್ಲಿ ಕೇವಲ 2000 ರೂ. ಮಾತ್ರವೆ ಡಿಫಾಸಿಟ್ ಹಣ ಎಂದು ಅಂತಿಮವಾಗಿ ಲೆಕ್ಕ ತೋರಿಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ತನ್ನ ಎಲ್ಲಾ ಕೋರ್ಸುಗಳನ್ನು ಮುಗಿಸಿ ಹಾಸ್ಟೆಲ್ ಬಿಡುವ ಸಂದರ್ಭದಲ್ಲಿ ಅರ್ಜಿ ಶುಲ್ಕ 150. ರೂ, ಭದ್ರತಾ ಮುಂಗಡ ಠೇವಣಿ 2000 ರೂ. ನಿಲಯದ ಅಭಿವೃದ್ದಿ ಶುಲ್ಕ 1430 ರೂ. ಕೊಠಡಿ ಬಾಡಿಗೆ (10 ತಿಂಗಳಿಗೆ) 1500 ರೂ. ನೌಕರರ ಕಲ್ಯಾಣ ನಿಧಿ ( 10ತಿಂಗಳಿಗೆ) 1000 ರೂ. ಮಿಸಲೇನಿಯಸ್ (10 ತಿಂಗಳಿಗೆ) 3000 ರೂ ಹಣ ವಸೂಲಿ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ಸುಲಿಗೆ ಮಾಡಲಾಗುತ್ತಿದೆ. ಕೂಡಲೇ ಕುಲಪತಿಗಳು ವಿದ್ಯಾರ್ಥಿಗಳಿಗೆ ಶುಲ್ಕದ ಸುಲಿಗೆಯಿಂದ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.
ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್ ಪಿ. ಗಿರೀಶ್, ಬಿ. ಲೋಕೇಶ್, ಈ.ಟಿ ನಿತಿನ್ ರಾವ್, ಎಸ್ ಕುಮರೇಶ್, ಪುಷ್ಪಕ್ ಕುಮಾರ್, ರಾಕೇಶ್ ಮುತ್ತಿಗೆ, ಕೆ.ಎಂ. ಪವನ್ , ಗಗನ್ ಜಾಹಿದ್ ಉಲ್ಲಾ ಇನ್ನಿತರರು ಇದ್ದರು.