Monday, August 8, 2022

Latest Posts

ಕುವೆಂಪು ವಿವಿ ಘಟಿಕೋತ್ಸವ: ಪದವೀಧರರ ಜತೆಗೆ ಉದ್ಯೋಗಾವಕಾಶ ಹೆಚ್ಚಾಗಬೇಕು: ಪ್ರೊ. ಪಿ.ವಿ. ಕೃಷ್ಣ ಭಟ್

ಶಿವಮೊಗ್ಗ: ವಿಶ್ವವಿದ್ಯಾಲಯಗಳಿಂದ ಪದವಿ ಪಡೆದು ಹೊರ ಬರುತ್ತಿರುವ ವಿದ್ಯಾರ್ಥಿಗಳ ಪ್ರಮಾಣಕ್ಕೆ ಅನುಗುಣವಾಗಿ ಉದ್ಯೋಗ ಸೃಜನೆ ಹೆಚ್ಚಳದ ಜತೆಗೆ ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರಗಳು ಯೋಜನೆಗಳನ್ನು ರೂಪಿಸಬೇಕಿದೆ ಎಂದು ಒಡಿಶಾದ ಕೋರಾಟಪುಟ್‌ನಕೇಂದ್ರೀಯ ವಿಶ್ವವಿದ್ಯಾಲಯದ ಪ್ರೊ. ಪಿ.ವಿ. ಕೃಷ್ಣ ಭಟ್ ಹೇಳಿದರು.
ಕುವೆಂಪು ವಿಶ್ವ ವಿಶ್ವವಿದ್ಯಾಲಯವು ಶಂಕರಘಟ್ಟದ ಜ್ಞಾನ ಸಹ್ಯಾದ್ರಿಯಲ್ಲಿ ವೆಬಿನಾರ್ ಮೂಲಕ ಬುಧವಾರ ಆಯೋಜಿಸಿದ್ದ 30 ನೇ ಘಟಿಕೋತ್ಸವದಲ್ಲಿ ಪ್ರಧಾನ ಭಾಷಣ ಮಾಡಿದ ಅವರು,ವಿವಿಗಳ ಸಂಖ್ಯೆ ಹೆಚ್ಚಾಗಬೇಕು. 2025ಕ್ಕೆ ಸ್ನಾತಕೋತ್ತರ ಪದವೀಧರರ ಸಂಖ್ಯೆ ಹೆಚ್ಚಳ ಮಾಡಬೇಕೆಂದುಉದ್ದೇಶಿಸಲಾಗಿದೆ. ಇದರಿಂದ ಪ್ರಯೋಜನವಾದೀತೆ ಎಂದು ಚಿಂತನೆ ನಡೆಸಬೇಕಿದೆ. ಪದವೀಧರರ ಜತೆಗೆ ಉದ್ಯೋಗಾವಕಾಶ ಹೆಚ್ಚಾಗಬೇಕು ಎಂದರು.
ಬ್ರಿಟೀಷ್ ಆಡಳಿತ ಕರಿನೆರಳು :ಬ್ರಿಟೀಷ್ ಆಡಳಿತ ಕರಿನೆರಳು ವಿಶ್ವವಿದ್ಯಾಲಯಗಳ ಮೇಲೆ ಇನ್ನೂ ಹರಡಿಕೊಂಡಿದ್ದು, ದೆಹಲಿಯ ಜವಾಹಲಾಲ್ ನೆಹರೂ ವಿವಿ ಸೇರಿದಂತೆ ಹಲವು ವಿವಿಗಳಲ್ಲಿ ನಡೆಯುತ್ತಿರುವ ದೇಶ ವಿರೋಧಿ ಚಟುವಟಿಕೆಗಳು ಇದಕ್ಕೆ ನಿದರ್ಶನವಾಗಿವೆ. ವಿದ್ಯಾರ್ಥಿಗಳು ದೇಶ ಒಡೆಯುವ ಘೋಷಣೆಗಳನ್ನು ಕೂಗುವ ಜವಾಹರಲಾಲ್ ನೆಹರೂ ವಿವಿ ಗಮನ ಸೆಳೆದಿತ್ತು. ದೇಶ ಕಟ್ಟಬೇಕಾದ ವಿವಿಗಳು ದೇಶ ಒಡೆಯುವ ಮಾತನಾಡುವುದನ್ನು ಕಲಿಸುತ್ತಿವೆ ಎಂದು ವಿಷಾದಿಸಿದರು.
ರಾಜಕೀಯ ದಾಸ್ಯದಿಂದ ನಾವು ಹೊರಬಂದಿದ್ದರೂ ಕೂಡ ವೈಚಾರಿಕತೆ, ಆಚಾರ, ವಿಚಾರಗಳಲ್ಲಿ ಮಾತ್ರ ವಿದೇಶಿ ದಾಸ್ಯದಿಂದ ಹೊರ ಬಂದಿಲ್ಲ.ಅನೇಕರ ಮನಸ್ಥಿತಿ ಇಂದಿಗೂ ಕೂಡ ವಿದೇಶಿಗರದ್ದಾಗಿದೆ ಎಂದರು.
ನಿಷೇಧಾತ್ಮಕ ಶಿಕ್ಷಣ ನೀಡಿಕೆ: ಇಂದಿನ ಶಿಕ್ಷಣದಲ್ಲಿ ಹಲವು ಒಳ್ಳೆಯ ಅಂಶಗಳಿರಬಹುದು ಆದರೆ ನಿಷೇಧಾತ್ಮಕ ಶಿಕ್ಷಣ ಇಂದುನೀಡಲಾಗುತ್ತಿದೆ. ಮನುಷ್ಯ ನಿರ್ಮಾಣಕ್ಕೆ ಶಿಕ್ಷಣ ಪೂರಕವಾ ಗಿಲ್ಲ. ಸೈದ್ಧಾಂತಿಕ ನ್ಯೂನತೆಗಳೊಂದಿಗೆ ಶಿಕ್ಷಣ ವ್ಯಾಪಾರೀಕರಣವಾಗಿದೆ. ಪ್ರಶ್ನೆಪತ್ರಿಕೆಗಳ ರಚನೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನದಲ್ಲಿಯೂ ಪ್ರಭಾವ ಬಳಸಲಾಗುತ್ತಿದೆ. ತಮ್ಮದೇ ಶಿಕ್ಷಣ ಸಂಸ್ಥೆಗೆ ಸೇರಿದರೆ ಹೆಚ್ಚು ಅಂಕಗಳನ್ನುಪಡೆಯಬಹುದಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ ಎಂದು ಹೇಳಿದರು.
ವಿವಿಗಳಲ್ಲಿಯೂ ಭ್ರಷ್ಟಾಚಾರ: ವಿಶ್ವವಿದ್ಯಾಲಯಗಳಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ. ಕುಲಪತಿಗಳ ನೇಮಕದಲ್ಲಿಯೂ ಕೂಡ ಹಣಕಾಸಿನ ವ್ಯವಹಾರ ನಡೆಯುತ್ತಿದೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ನ್ಯಾಯಾಲಯದ ವ್ಯವಸ್ಥೆಯಂತೆ ವಿಶ್ವವಿದ್ಯಾಲಯಗಳ ವ್ಯವಸ್ಥೆಯನ್ನು ಮಾಡಬೇಕಿದೆ. ನ್ಯಾಯಾಧೀಶರ ನೇಮಕದಂತೆ ಕುಲಪತಿಗಳ ನೇಮಕವಾಗಬೇಕೆಂದು ಸಲಹೆ ನೀಡಿದರು.
ಜ್ಞಾನ, ಕೌಶಲ್ಯ ಹಾಗೂ ಮೌಲ್ಯ ಪ್ರಜ್ಞೆ ಇವು ಅತ್ಯಗತ್ಯವಾಗಿವೆ. ಇಂದು ಭ್ರಷ್ಟಾಚಾರದಲ್ಲಿ ತೊಡಗುವವರು ವಿದ್ಯಾವಂತರೇ ಆಗಿದ್ದಾರೆ. ಇವರಲ್ಲಿ ಮೌಲ್ಯ ಪ್ರಜ್ಞೆ ಇಲ್ಲದೆ ಇರುವುದು ಇದಕ್ಕೆಕಾರಣವಾಗಿದೆ. ಭ್ರಷ್ಟಾಚಾರದಿಂದಾಗಿ ಕ್ರೌರ್ಯ, ಹಿಂಸೆ, ವ್ಯಕ್ತಿತ್ವ ವಿಘಟನೆಗಳು ಮೆರೆಯುವಂತಾಗಿದೆ ಎಂದರು.ಇಂದು ಕೊರೋನಾದಂತಹ ಸೋಂಕು ವ್ಯಾಪಿಸುತ್ತಿದ್ದು, ಚೀನಾದ ಅಕ್ರಮಣ ಪ್ರವೃತ್ತಿಯೂ ಇನ್ನೊಂದು ಕಡೆ ಹೆಚ್ಚುತ್ತಿದೆ. ಪರದೇಶದ ಅವಲಂಬನೆ ತೊಡೆದು ಹಾಕಿ ಸಮಗ್ರ ಭಾರತ ನಿರ್ಮಾಣಕ್ಕೆ ಯುವ ಜನತೆ ಕಾರ್ಯಮಗ್ನರಾಗಬೇಕಿದೆ. ಪ್ರಧಾನಿ ಮೋದಿಯವರ ಆಶಯದಂತೆ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಸಾಧನೆಯತ್ತ ಮುಖ ಮಾಡಬೇಕು ಎಂದು ಕರೆ ನೀಡಿದರು.
ಸಮಕುಲಾಧಿಪತಿಗಳು ಆದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಕುಲಸಚಿವರಾದಪ್ರೊ.ಎಸ್.ಎಸ್. ಪಾಟೀಲ್, ಪ್ರೊ.ಎಂ. ವೆಂಕಟೇಶ್ವರಲು, ಸಿಂಡಿಕೇಟ್ ಸದಸ್ಯರು ಇದ್ದರು.
ಪದವಿ ಪ್ರದಾನ
ಘಟಿಕೋತ್ಸವದಲ್ಲಿ 194 ಪಿಎಚ್‌ಡಿ ಪದವಿ ಹಾಗೂ ಸ್ನಾತಕೋತ್ತರ ಹಾಗೂ ಸ್ನಾತಕಸೇರಿದಂತೆ ಒಟ್ಟು 23,732 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪದವಿ ಪಡೆದಿರುವುದು ಇನ್ನೊಂದು ವಿಶೇಷವಾಗಿತ್ತು. ಘಟಿಕೋತ್ಸವ ಉಡುಪಿನಲ್ಲಿಯೂ ಬದಲಾವಣೆ ಮಾಡಲಾಗಿದ್ದು ಸಾಂಪ್ರದಾಯಿಕ ಮೈಸೂರು ಪೇಟ ರಾರಾಜಿಸಿದವು.ಶಂಕರಘಟ್ಟದ ಜ್ಞಾನ ಸಹ್ಯಾದ್ರಿಯ ಕನ್ನಡ ಅಧ್ಯಯನ ವಿಭಾಗದರಂಗನಾಥ ಎಚ್. ಎಂಎ ನಲ್ಲಿ 10 ಸ್ವರ್ಣ ಪದಕ ಹಾಗೂ 3 ನಗದು ಬಹುಮಾನ, ಜ್ಞಾನ ಸಹ್ಯಾದ್ರಿಯ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಸಂಚಿತಾ ಎಂ.ಆರ್.(ಎಂಎಸ್‌ಸಿ), ಶಿವಮೊಗ್ಗಎನ್‌ಇಎಸ್ ಕಾಲೇಜಿನ ಬೀಬಿ ರುಖಯ್ಯ (ಬಿ.ಕಾಂ) ಇವರು 5 ಸ್ವರ್ಣ ಪದಕ ಪಡೆದು ಗಮನ ಸೆಳೆದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss