Saturday, August 13, 2022

Latest Posts

ಕುವೈಟ್, ಯುಎಇ , ಮಸ್ಕತ್‌ ನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು 422 ಮಂದಿ!

ಮಂಗಳೂರು: ವಂದೇ ಭಾರತ್ ಮಿಷನ್ ಸಹಿತ ಮೂರು ವಿಮಾನಗಳಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಟ್ಟು 422 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಕುವೈಟ್, ಯುಎಇ ಮತ್ತು ಮಸ್ಕತ್‌ನಲ್ಲಿ ಸಿಲುಕಿ ತೀವ್ರ ಸಂಕಷ್ಟದಲ್ಲಿದ್ದ  ಅನಿವಾಸಿ ಭಾರತೀಯರು ಮಂಗಳವಾರ ತಡರಾತ್ರಿ ಮತ್ತು ಬುಧವಾರ ಮೂರು ವಿಮಾನಗಳಲ್ಲಿ ಮಂಗಳೂರಿಗೆ ಬಂದಿಳಿದಿದ್ದಾರೆ. ಕೋವಿಡ್ ಮಾರ್ಗಸೂಚಿಯಂತೆ ಅವರನ್ನು ನಗರದ ವಿವಿಧ ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಮೂರು ವಿಮಾನಗಳಲ್ಲಿ ಎರಡು ಚಾರಿಟಿ ವಿಮಾನಗಳಾಗಿವೆ. ಮಂಗಳವಾರ ತಡರಾತ್ರಿ ಯುಎಇಯಿಂದ 174 ಪ್ರಯಾಣಿಕರೊಂದಿಗೆ ಒಂದು ವಿಮಾನ ಆಗಮಿಸಿದ್ದರೆ, ಇನ್ನೊಂದು ಬುಧವಾರ ಸಂಜೆ ೧೬೮ ಪ್ರಯಾಣಿಕರನ್ನು ಹೊತ್ತು ಕುವೈಟ್‌ನಿಂದ ಬಂದಿಳಿದಿದೆ. ವಂದೇ ಭಾರತ್ ಮಿಷನ್ ಅಡಿಯಲ್ಲಿ ಒಂದು ವಿಮಾನ ಮಸ್ಕತ್‌ನಿಂದ ಬೆಂಗಳೂರಿಗೆ ಬಂದು ಅಲ್ಲಿಂದ ಮಂಗಳೂರಿಗೆ 80 ಪ್ರಯಾಣಿಕರನ್ನು ಕರೆತಂದಿದೆ.
ಕುವೈಟ್‌ನಿಂದ 168 ಪ್ರಯಾಣಿಕರ ಖರ್ಚನ್ನು ಅಲ್ಲಿನ ಅಕ್ಬರ್ ಟ್ರಾವೆಲ್ಸ್ ಆಫ್ ಇಂಡಿಯಾ ಪ್ರೈ.ಲಿ. ಭರಿಸಿದ್ದು, ಈ ವಿಮಾನವು ಬುಧವಾರ ಸಂಜೆ ೫ಕ್ಕೆ ಮಂಗಳೂರಿಗೆ ಬಂದಿದೆ. 80 ಪ್ರಯಾಣಿಕರನ್ನು ಹೊತ್ತ ಮಸ್ಕತ್- ಬೆಂಗಳೂರು- ಮಂಗಳೂರು ವಂದೇ ಭಾರತ್ ಮಿಷನ್‌ನ ವಿಮಾನವು ಬುಧವಾರ ರಾತ್ರಿ 7.30 ರ ವೇಳೆಗೆ ಆಗಮಿಸಿದೆ ಎಂದು ಪುತ್ತೂರು ಸಹಾಯಕ ಆಯುಕ್ತ ಯತೀಶ್ ಉಳ್ಳಾಲ್ ತಿಳಿಸಿದ್ದಾರೆ.
ಮಂಗಳವಾರ ತಡರಾತ್ರಿ ಯುಎಇಯ ಶಾರ್ಜಾದಿಂದ ಆಗಮಿಸಿದ 174 ಪ್ರಯಾಣಿಕರನ್ನೊಳಗೊಂಡ ಚಾರಿಟಿ ಫ್ಲೈಟ್‌ನ ಖರ್ಚನ್ನು ಅಲ್ಲಿನ ಫಾರ್ಚೂನ್ ಗ್ರೂಪ್ ಆಫ್ ಹೊಟೇಲ ಮತ್ತು ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಭರಿಸಿದ್ದಾರೆ. ಈ ವಿಮಾನದ ಪ್ರಯಾಣಿಕರು ಅವರ ಸಿಬ್ಬಂದಿ, ಕುಟುಂಬ ಸದಸ್ಯರು ಮತ್ತು ಹಿರಿಯ ಅಧಿಕಾರಿಳಾಗಿದ್ದಾರೆ.
ಎಲ್ಲ ವಿಮಾನ ಪ್ರಯಾಣಿಕರನ್ನು ಆರಂಭಿಕ ಆರೋಗ್ಯ ತಪಾಸಣೆಯ ನಂತರ ಏಳು ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್‌ಗೆ ವಿವಿಧ ಹೊಟೇಲ್‌ಗಳಿಗೆ ಕಳುಹಿಸಲಾಗಿದೆ. ಐದು ದಿನಗಳ ನಂತರ ಕೋವಿಡ್-19 ಪರೀಕ್ಷೆಗಾಗಿ ಅವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss