ಕುಶಾಲನಗರ: ನಿವೇಶನ ರಹಿತ ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವಾಸಿಯೊಬ್ಬರಿಗೆ ನಿವೇಶನ ನೀಡುವಂತೆ ರಾಜ್ಯ ಮಟ್ಟದ ಅಧಿಕಾರಿಗಳು ನಿರ್ದೇಶನ ನೀಡಿದ್ದರೂ, ಅರ್ಹ ಫಲಾನುಭವಿಗೆ ಇನ್ನೂ ನಿವೇಶನ ವಿತರಣೆಯಾಗದಿರುವುದು ಕಂಡು ಬಂದಿದೆ.
ಕೂಡಿಗೆ ಗ್ರಾಮದ ನಿವೃತ್ತ ಪೋಲಿಸ್ ಪೇದೆ ಎ.ಆರ್. ಗೋಪಾಲ ಎಂಬವರು ನಿವೇಶನ ರಹಿತರಾಗಿದ್ದು, ಕಳೆದ ೧೫ ವರ್ಷಗಳಿಂದ ಇದೇ ಗ್ರಾಮದಲ್ಲಿ ವಾಸವಿದ್ದಾರೆ. ಅನಾರೋಗ್ಯದಿಂದಲೂ ಬಳಲುತ್ತಿರುವ ಅವರು ತಮಗೆ ನಿವೇಶನ ಮಂಜೂರು ಮಾಡುವಂತೆ ಕಳೆದ ವರ್ಷ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು.
ಮುಖ್ಯಮಂತ್ರಿ ಕಾರ್ಯಾಲಯದ ಉಪಕಾರ್ಯದರ್ಶಿಯವರು ಪತ್ರವನ್ನು ಪರಿಶೀಲನೆ ಮಾಡಿ, ಈ ಫಲಾನುಭವಿಗೆ ನಿವೇಶನ ನೀಡುವಂತೆ ಜಿಲ್ಲಾ ಪಂಚಾಯತ್ಗೆ ಶಿಫಾರಸ್ಸು ಮಾಡುವುದರೊಂದಿಗೆ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಗೋಪಾಲ್ ಅವರಿಗೆ ನಿವೇಶನ ನೀಡುವ ಭರವಸೆ ಜಿಲ್ಲಾ ಪಂಚಾಯತ್ನಿಂದ ದೊರಕಿದ್ದರೂ, ಕೂಡಿಗೆ ಗ್ರಾಮ ಪಂಚಾಯಿತಿಯವರು ನಿವೇಶನ ಗುರುತು ಮಾಡುವಲ್ಲಿ ಕಳೆದ ೮ ತಿಂಗಳುಗಳಿಂದ ವಿಫಲರಾಗಿದ್ದಾರೆ.
ಪಂಚಾಯಿತಿಯ ಈ ವಿಳಂಬ ನೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಗ್ರಾಮಸ್ಥರು, ಸಂಬಂಧಿಸಿದವರು ನಿವೇಶನ ರಹಿತರಿಗೆ ನಿವೇಶನ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.