ಕುಶಾಲನಗರ: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆ ಭರ್ತಿಯಾದ ಹಿನ್ನೆಲೆಯಲ್ಲಿ ಕೊಡಗು ಸೇರಿದಂತೆ ಪಕ್ಕದ ಎರಡು ಜಿಲ್ಲೆಗಳ ನಾಲ್ಕು ತಾಲೂಕುಗಳಿಗೆ ಸೇರಿದ ಹಾರಂಗಿ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ಹರಿಸಲಾಗಿದ್ದು, ಪರಿಣಾಮವಾಗಿ ನಾಟಿ ಕಾರ್ಯ ಚುರುಕುಗೊಂಡಿದೆ.
ಜಿಲ್ಲೆಯ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ತಮ್ಮ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ಶಿಫಾರಸ್ಸು ಮಾಡಿದ ವಿವಿಧ ಹೈಬ್ರಿಡ್ ತಳಿ ಭತ್ತದ ಬಿತ್ತನೆ ಬೀಜಗಳಾದ ಐ ಅರ್ 64 , ತುಂಗಾ, ತನು ಅತೀರಾ ಸೇರಿದಂತೆ ಅತಿ ಸಣ್ಣ ಅಕ್ಕಿಯ ಭತ್ತದ ಬೀಜಗಳನ್ನು ಸಹಕಾರ ಸಂಘಗಳಿಂದ ಖರೀದಿಸಿ ತಮ್ಮ ಜಮೀನಿನಲ್ಲಿ ಸಸಿ ಮಡಿಗಳನ್ನು ಮಾಡಿದ್ದಾರೆ.
ಕಳೆದ 15 ದಿನಗಳ ಹಿಂದಿನಿಂದ ಭೂಮಿಯನ್ನು ಉಳುಮೆ ಮಾಡಿ ಹದ ಮಾಡಿದ್ದ ಗದ್ದೆಗಳಲ್ಲಿ, ನಾಲೆಯಲ್ಲಿ ನೀರು ಬಂದ ದಿನಗಳಿಂದ ಉಳುಮೆ ಮಾಡಿ ನಾಟಿ ಮಾಡಲು ಸಿದ್ದರಾಗಿದ್ದರು.
ಹಾರಂಗಿಯ ಅಚ್ಚುಕಟ್ಟು ಪ್ರದೇಶದಗಳಾದ ಹುದುಗೂರು ಮಲ್ಲೇನಹಳ್ಳಿ ಮದಲಾಪುರ,ಹೆಬ್ಬಾಲೆ ತೊರೆನೂರು, ಶಿರಂಗಾಲ, ಹಳೆಗೋಟೆ, ಕಣಿವೆ, ಕೂಡಿಗೆ ವ್ಯಾಪ್ತಿಗಳಲ್ಲಿ ನಾಟಿ ಕಾರ್ಯ ಚುರುಕುಗೊಂಡಿದೆ.
ಈ ಸಾಲಿನಲ್ಲಿ ರೈತರು ಹೆಚ್ಚು ಸಾವಯವ ಗೊಬ್ಬರ ಬಳಕೆ ಮಾಡಲು ಮುಂದಾಗಿದ್ದು, ಈಗಾಗಲೇ ರೈತರು ತಮ್ಮ ಜಮೀನಿನಲ್ಲಿ ಮರದ ಎಲೆಗಳ ಜೊತೆಗೆ ಸಗಣಿ ಗೊಬ್ಬರ ಸೇರಿದಂತೆ ಸಾವಯವ ಗೊಬ್ಬರವನ್ನು ಹಾಕಿ ನಾಟಿ ಕೆಲಸ ಅರಂಭಿಸಿದ್ದಾರೆ.