ಕುಶಾಲನಗರ: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಜಲಾಶಯದಲ್ಲಿ ಈಗಾಗಲೇ ನೀರಿನ ಮಟ್ಟ ಹೆಚ್ಚುತ್ತಿದೆ. ಅಣೆಕಟ್ಟೆಯ ಭದ್ರತೆಗೆ ಅಗತ್ಯವಿರುವ ನೀರಿನ ಮಟ್ಟವನ್ನು ಕಾಯ್ದುಕೊಂಡು ಅಣೆಕಟ್ಟೆ ಪೂರ್ತಿ ಭರ್ತಿಯಾಗುವುದಕ್ಕಿಂತ ಮೊದಲೇ ನದಿಗೆ ನೀರನ್ನು ಹರಿಸುವಂತೆ ಹಾರಂಗಿ ನದಿ ದಂಡೆಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಹಾರಂಗಿ ಅಣೆಕಟ್ಟೆ ಭರ್ತಿಯಾದ ಬಳಿಕ ಏಕಾಏಕಿ ಭಾರೀ ಪ್ರಮಾಣದ ನೀರನ್ನು ನದಿಗೆ ಹರಿಸಿದ ಪರಿಣಾಮ ಜಲಾಶಯದ ಕೆಳಭಾಗದ ನದಿ ದಡದ ಪ್ರದೇಶಗಳು ನೀರಿನಲ್ಲಿ ಮುಳುಗಿ ಭಾರೀ ನಷ್ಟ ಅನುಭವಿಸಬೇಕಾಯಿತು. ಅಣೆಕಟ್ಟೆಯಲ್ಲಿ ಏಕಾಏಕಿ ನೀರಿನ ಮಟ್ಟ ಹೆಚ್ಚಿದಾಗ ಅಣೆಕಟ್ಟೆಗೆ ಅಪಾಯವಾಗಬಹುದೆಂಬ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಹರಿಯಬಿಟ್ಟ ಪರಿಣಾಮ ಕೂಡಿಗೆಯ ಹತ್ತಿರ ಕಾವೇರಿ ಮತ್ತು ಹಾರಂಗಿ ನದಿ ಸಂಗಮವಾಗುವಾಗ ಎರಡು ನದಿಗಳಲ್ಲಿ ನೀರು ಹಿಂದಕ್ಕೆ ತಳ್ಳಲ್ಪಟ್ಟು ಕುಶಾಲನಗರ ಬಳಿಯವರೆಗಿನ ಸಾಯಿಬಾಬ ಬಡಾವಣೆ, ಮುಳ್ಳುಸೋಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನೇಕ ಬಡಾವಣೆಗಳು, ನೂರಾರು ಎಕರೆ ಜಮೀನು, ನೂರಾರು ಮನೆಗಳು ಜಲಾವೃತಗೊಂಡು ಭಾರೀ ನಷ್ಟ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಹುದುಗೂರು ಗ್ರಾಮಸ್ಧರು ಸಭೆ ಸೇರಿ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟದ ಮಿತಿಯನ್ನು ಕಾಯ್ದುಕೊಂಡು ನಂತರ ಕೆಳ ಮಟ್ಟದ ಗ್ರಾಮಸ್ಧರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಅಣೆಕಟ್ಟೆಯಿಂದ ನೀರನ್ನು ಹರಿಸುವಂತೆ ನೂರಾರು ಗ್ರಾಮಸ್ಧರು ಕಾವೇರಿ ನೀರಾವರಿ ನಿಗಮಕ್ಕೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ.