ಧಾರವಾಡ: ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್ಟಿಎಸ್ ಯೋಜನೆ ಮೇಲ್ಸೇತುವೆ ತಡೆಗೊಂಡೆ ಫ್ಯಾನೆಲ್ಗಳು ಕಳಚಿ ಬಿದ್ದಿವೆ. ಕಳಪೆ ಕಾಮಗಾರಿ ಮಾಡಿದ ಎಂಜನೀಯರ್ ಹಾಗೂ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಶಾಸಕ ಅರವಿಂದ ಬೆಲ್ಲದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಭೇಟಿ ಮಾಡಿ, ಹು-ಧಾ ಅವಳಿನಗರದ ನಡುವೆ ಕೈಗೊಂಡಿರುವ ಬಿಆರ್ಟಿಎಸ್ ಯೋಜನೆ ಕಾಮಗಾರಿ ಕಳಪೆ ಹಾಗೂ ಅವೈಜ್ಞಾನಿಕವಾಗಿದೆ. ಎರಡು ವರ್ಷಗಳಿಂದ ಅಧಿಕಾರಿಗಳ ಗಮನಕ್ಕೆ ತಂದರೂ, ಸ್ಪಂದನೆ ನೀಡಿಲ್ಲ ಎಂದು ಬಿಎಸ್ವೈ ಮುಂದೆ ದೂರಿದ್ದಾರೆ.
ಈ ಬಗ್ಗೆ ಬೆಂಗಳೂರಿನ ಬಿಆರ್ಟಿಎಸ್ ಅಧಿಕಾರಿಗಳಿಗೆ ಹಲವು ಪತ್ರ ಬರೆದಿದೆ. ಮನವಿ ಮಾಡುವ ಜತೆಗೆ ಅನೇಕ ಸಭೆಗಳಲ್ಲಿ ಗಮನ ಸೆಳೆಯಲಾಗಿದೆ. ಆದಾಗ್ಯೂ ಕ್ರಮ ಕೈಗೊಂಡಿಲ್ಲ. ಗೋಡೆ ಕುಸಿತದಿಂದ ನವಲೂರಿನ ಸಾರ್ವಜನಿಕರು ಆತಂಕದಲ್ಲಿ ಬದಕುವಂತಾಗಿದೆ ಎಂದು ಹೇಳಿದ್ದಾರೆ.
ಕುಸಿದ ಮೇಲ್ಸೇತುವೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಹಾಗೂ ಎಂಜನೀಯರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಶಾಸಕರ ಮನವಿಗೆ ಸ್ಪಂದಿಸಿದ ಬಿಎಸ್ವೈ, ಈ ಬಗ್ಗೆ ಸೂಕ್ರ ಕ್ರಮ ಕೈಗೊಂಡು ಮೂರು ತಿಂಗಳಲ್ಲಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.