ಬೆಂಗಳೂರು: ನಾಮಪತ್ರ ಸಲ್ಲಿಕೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ದೂರು ದಾಖಲಾಗಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೆಂಡಾಮಂಡಲರಾಗಿದ್ದಾರೆ.
ಗುರುವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹೆಣ್ಣು ಮಕ್ಕಳ ವಿರುದ್ಧ ದೌರ್ಜನ್ಯ ಎಸಗಿ ನೀಚ ರಾಜಕಾರಣ ಮಾಡಲಾಗುತ್ತಿದೆ ಎಂದು ಆಕ್ರೋಶಭರಿತರಾಗಿ ನುಡಿದರು.
ನಾಮಪತ್ರ ಸಲ್ಲಿಕೆ ಕೇಂದ್ರದ ಸುತ್ತ ನಿಷೇಧಾಜ್ಞೆ ಇರುವುದು ಗೊತ್ತಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರಿನಲ್ಲಿ ಬಂದಿದ್ದು, ನಿಗದಿಗಿಂತ ಹೆಚ್ಚು ಜನ ಸೇರಿದ್ದು ಹಾಗೂ ನೀತಿ ಸಂಹಿತೆಯ ಇನ್ನಿತರ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಕುಸುಮಾ ವಿರುದ್ಧ ಎಫ್ಐಆರ್ ಸಹ ಆಗಿದೆ.
ಇದರಿಂದ ಕೆರಳಿ ಕೆಂಡಾಮಂಡಲರಾಗಿರುವ ಡಿಕೆಶಿ, ರಾಜ್ಯ ಸರ್ಕಾರ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣೆಗೆ ಅಡ್ಡಿಪಡಿಸುವ ಯತ್ನ ನಡೆಯುತ್ತಿದೆ. ನಮ್ಮ ಕಾರ್ಯಕರ್ತರಿಗೆ ಬಿಜೆಪಿ ಬೆದರಿಕೆ ಹಾಕುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ವಿರುದ್ಧ ಪ್ರಕರಣ ದಾಖಲಿಸಿ ನೋಡೋಣ:
ಬಿಜೆಪಿಯ ಸೇಡು ಮತ್ತು ಹೇಡಿತನದ ಇಂತಹ ರಾಜಕಾರಣಕ್ಕೆಲ್ಲಾ ಕಾಂಗ್ರೆಸ್ ಜಗ್ಗುವುದಿಲ್ಲ. ತಾಕತ್ತಿದ್ದರೆ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಿಸಿ. ಯಾರೆಲ್ಲಾ 100 ಮೀಟರ್ ಒಳಗಿದ್ದರೋ ಅವರೆಲ್ಲರ ವಿರುದ್ಧ ಕೇಸ್ ದಾಖಲಿಸಬೇಕು. ಸಚಿವರು, ಶಾಸಕರೂ ಇದ್ದರು. ಒಬ್ಬೊಬ್ಬರಿಗೊಂದು ನ್ಯಾಯ. ಕಾನೂನಾ ಎಂದು ಪ್ರಶ್ನಿಸಿದರು.
ಎಫ್ಐಆರ್ ದಾಖಲಿಸಿರುವ ಇನ್ ಸ್ಪೆಕ್ಟರ್ ವರ್ಗಾವಣೆ ಮಾಡಿ. ಈ ಬಗ್ಗೆ ಸಿಎಂ ಸ್ಪಷ್ಟನೆ ನೀಡಬೇಕು. ಕಾಂಗ್ರೆಸಿನಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ ಎಂದರು.