ಹೊಸದಿಗಂತ ವರದಿ,ಕುಶಾಲನಗರ:
ಇಲ್ಲಿಗೆ ಸಮೀಪದ ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಭಾನುವಾರ ಮುಂಜಾನೆ ರಥೋತ್ಸವ ಜರುಗಿತು.
ಕಾವೇರಿ ಹಾಗೂ ಹಾರಂಗಿ ನದಿಗಳ ಸಂಗಮ ಸ್ಧಳವಾದ ಕೂಡಿಗೆಯ ಟಾಟಾ ಕಾಫಿ ಕುಶಾಲನಗರ ವರ್ಕ್ಸ್ ಆವರಣದಲ್ಲಿರುವ ದೇವಾಲಯದಲ್ಲಿ ರಥೋತ್ಸವದ ಅಂಗವಾಗಿ ಬೆಳಗಿನಿಂದಲೇ ಹೋಮ ,ಹವನ ,ವಿಶೇಷ ಅಭಿಷೇಕ,ಪೂಜಾ ಕೈಂಕರ್ಯಗಳು ನಡೆದವು.
ಬೆಳಗ್ಗೆ 8 ಗಂಟೆಗೆ ರಥ ಬಲಿ, ಕಳಸ ಪೂಜೆ ನಂತರ ಶ್ರೀ ಸ್ವಾಮಿಯ ಮೂರ್ತಿಯನ್ನು ಅಲಂಕೃತ ರಥದಲ್ಲಿ ಕುಳ್ಳಿರಿಸಿ ದೇವಾಲಯ ಆವರಣದಲ್ಲಿ ಸ್ವಲ್ಪ ದೂರದವರೆಗೆ ಎಳೆದೊಯ್ದು ನಂತರ ಸ್ವ ಸ್ಧಳದಲ್ಲಿ ನಿಲ್ಲಿಸಲಾಯಿತು.
ಕೊರೋನಾ ಹಿನ್ನೆಲೆಯಲ್ಲಿ ಸಂಪ್ರದಾಯಕ್ಕನುಗುಣವಾಗಿ ಈ ಬಾರಿ ಸರಳವಾಗಿ ಪೂಜಾಕಾರ್ಯ,ರಥೋತ್ಸವದ ವಿಧಿವಿಧಾನಗಳನ್ನು ಹಿರಿಯ ಅರ್ಚಕ ಅನಂತ ಮೂರ್ತಿ ,ದೇವಾಲಯದ ಪ್ರಧಾನ ಅರ್ಚಕ ನವೀನ್ ಭಟ್ ಮತ್ತು ತಂಡದವರು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಅಧ್ಯಕ್ಷ ಕೂಡಿಗೆಯ ಟಾಟಾ ಕಾಫಿಯ ಸಂಸ್ಧೆಯ ಹಿರಿಯ ವ್ಯವಸ್ಥಾಪಕ ವಿವೇಕ್ ಅಯ್ಯಣ್ಣ, ಕಾರ್ಯದರ್ಶಿ ಡಿ .ಕೆ.ಪೊನ್ನಪ್ಪ, ಸಹ ಕಾರ್ಯದರ್ಶಿ ಮಂದಣ್ಣ ,ಸಮಿತಿಯ ಸದಸ್ಯರು, ಸತ್ಯನಾರಾಯಣ ವ್ರತಾಚರಣೆ ಸಮಿತಿಯ ಸದಸ್ಯರು, ಕೂಡುಮಂಗಳೂರು ಗ್ರಾಮದ ಮುಖ್ಯಸ್ಥರು ಹಾಗೂ ಭಕ್ತಾದಿಗಳು ಆಗಮಿಸಿ ಕೊರೋನಾ ನಿಯಮನುಸಾರವಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು ಪೂಜೆ ಸಲ್ಲಿಸಿದರು.
ಸರಳವಾಗಿ ಆಚರಣೆಗೊಂಡ ಷಷ್ಠಿ ಪೂಜೆ ಹಾಗೂ ರಥೋತ್ಸವಕ್ಕೆ ಕೂಡಿಗೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಾಕ್ಷಿಯಾದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ನೇತೃತ್ವದಲ್ಲಿ ಬಂದೂಬಸ್ತ್ ವ್ಯವಸ್ಥೆ ಮಾಡಲಾಗಿತ್ತು.