ಬಳ್ಳಾರಿ: ಜಿಲ್ಲೆಯ ಕೂಡ್ಲಗಿ ತಾಲೂಕು ಹೊಸದಿಗಂತ ವರದಿಗಾರ ಬಿ.ಎಂ.ತ್ರಿಮೂರ್ತಿ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಿ.ಎಂ.ಪರಿಹಾರ ನಿಧಿಯಿಂದ 5 ಲಕ್ಷ ರೂ.ಪರಿಹಾರ ಘೊಷಣೆ ಮಾಡಿದ್ದಾರೆ. ನೋವೆಲ್ ಕೊರೋನಾ ಸಂದರ್ಭದಲ್ಲಿ ವರದಿಗಾರ ತ್ರಿಮೂರ್ತಿ ಅವರು ನಿಧನರಾಗಿದ್ದು, ಈ ಕುರಿತು ಕಾರ್ಯನಿರತ ಪತ್ರಕರ್ತರ ಸಂಘದ ಬಂಗ್ಲೆ ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಗಜಾಪೂರ ಭೀಮಣ್ಣ ಸೇರಿದಂತೆ ಸಂಘದ ಇತರೇ ಪ್ರಮುಖರು ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಅವರ ಗಮನಸೆಳೆದಿದ್ದರು. ನಂತರ ಶೀಬಾನಂದ್ ಅವರು ಸೇರಿದಂತೆ ವಿನಯ್, ಚಿದಾನಂದ್ ಪಾಟೀಲ್ ಅವರು ಪರಿಹಾರಕ್ಕಾಗಿ ಮುಖ್ಯಮಂತ್ರಿ ಬಿ.ಎಸ್.ವೈ ಅವರ ಗಮನಸೆಳೆದಿದ್ದರು. ರಾಜ್ಯದ ನಾನಾ ಕಡೆ ಇತ್ತೀಚಗೆ ಮೃತಪಟ್ಟ ಜಿಲ್ಲೆಯ ತ್ರಿಮೂರ್ತಿ ಸೇರಿದಂತೆ ಸೋಮಶೇಖರ ಯಡವಟ್ಟಿ, ವಿ.ಸ.ಹಿರೇಮಠ, ಕೆ.ಎಂ.ಹಾಲಪ್ಪ, ಪರ್ವತಯ್ಯ ಸ್ವಾಮೀ, ಎಸ್.ಎಚ್.ಜಯಣ್ಣ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಂಘದ ವತಿಯಿಂದ ಮನವಿ ಮಾಡಿದ್ದರು. ಕೂಡಲೇ ನೀಡಿದ ಮನವಿಗೆ ಸ್ಪಂದಿಸಿದ ಸಿ.ಎಂ.ಯಡಿಯೂರಪ್ಪ ಅವರು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಘೊಷಣೆ ಮಾಡಿದ್ದಾರೆ. ಪರಿಹಾರ ಘೊಷಿಸಿದ ಸರ್ಕಾರಕ್ಕೆ ಹಾಗೂ ಇದಕ್ಕೆ ಶ್ರಮಿಸಿದ ಸಂಘದ ಎಲ್ಲ ಸದಸ್ಯರಿಗೆ ಜಿಲ್ಲೆಯ ಪತ್ರಕರ್ತರು ಅಭಿನಂದಿಸಿದ್ದಾರೆ.