ಕಾಸರಗೋಡು: ಕೋವಿಡ್-19 ಹಿನ್ನೆಲೆಯಲ್ಲಿ ಸಂಕಷ್ಟ ಎದುರಿಸುತ್ತಿರುವ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸುಭಿಕ್ಷ ಕೇರಳ ಯೋಜನೆಯಡಿ ಕಾಸರಗೋಡು ಜಿಲ್ಲೆಯಲ್ಲಿ ಕೃಷಿ ಉತ್ಪಾದಕ (ಫಾರ್ಮರ್ಸ್ ಪ್ರೊಡ್ಯೂಸಿಂಗ್) ಕಂಪನಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.
ಜಿಲ್ಲೆಯ ಎಲ್ಲ ಬ್ಲಾಕ್ಗಳಲ್ಲಿ ಕೃಷಿಕರ ಒಡೆತನದ ಕಂಪನಿಗಳನ್ನು ಪ್ರಾರಂಭಿಸುವ ಮೂಲಕ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಗುರಿ ಇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಇದೀಗ ಕೃಷಿಕರು ಬೆಳೆದ ಹೇರಳ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಮಧ್ಯವರ್ತಿಗಳನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಇದೆ. ಅದನ್ನು ಹೋಗಲಾಡಿಸಲು ಜಿಲ್ಲೆಯ ಕೃಷಿಕರನ್ನು ಉದ್ಯಮಿಗಳನ್ನಾಗಿ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮೊದಲ ಹಂತದ ಪ್ರಕಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಕೃಷಿಕರನ್ನು ಹೊಂದಿರುವ ನೀಲೇಶ್ವರ, ಪರಪ್ಪ ಮತ್ತು ಹೊಸದುರ್ಗ ಬ್ಲಾಕ್ಗಳಲ್ಲಿ ಕೃಷಿಕರ ಕಂಪನಿಗಳನ್ನು ಆರಂಭಿಸಲಾಗುವುದು.
ಸುಭೀಕ್ಷ ಕೇರಳ ಯೋಜನೆಯಡಿ ಜಿಲ್ಲೆಯ ಯುವಕರು ಸೇರಿದಂತೆ ಅನೇಕರು ಕೃಷಿ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಕೃಷಿ ಉತ್ಪಾದಕ ಕಂಪನಿಗಳ ಪ್ರಾರಂಭದೊಂದಿಗೆ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಮತ್ತು ಅವುಗಳನ್ನು ಮೌಲ್ಯವರ್ಧಿತ ಉತ್ಪನ್ನಗಳಾಗಿ ಮಾರಾಟ ಮಾಡಲು ಕೃಷಿಕರಿಗೆ ಸಾಧ್ಯವಾಗುವುದು.
ತಲಾ 500 ಮಂದಿ ಕೃಷಿಕರ ಕೃಷಿ ಉತ್ಪಾದಕ ಕಂಪನಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಕಂಪನಿಯಲ್ಲಿ ಕೃಷಿಕರು ಮಾತ್ರ ಪಾಲುದಾರರಾಗಲು ಸಾಧ್ಯ.
ಕಂಪೆನಿಯ ಸದಸ್ಯನಾಗಲು 2,000ರೂ. ಪಾವತಿಸಬೇಕು. ಕಂಪೆನಿ ರಚನೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಣಕಾಸು ನೆರವು ಹಾಗೂ ಬ್ಯಾಂಕ್ ಸಾಲ ಲಭಿಸಲಿವೆ.
ಇದೇ ವೇಳೆ ಕೃಷಿ ಉತ್ಪಾದಕ ಕಂಪನಿಗಳನ್ನು ಪ್ರಾರಂಭಿಸುವ ಮೊದಲ ಹಂತದ ಭಾಗವಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜೀತ್ ಬಾಬು ಅವರ ಅಧ್ಯಕ್ಷತೆಯಲ್ಲಿ ನೀಲೇಶ್ವರ ಬ್ಲಾಕ್ನಲ್ಲಿ ಕೃಷಿಕರೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಸಿಪಿಸಿಆರ್ಐ ಪ್ರಧಾನ ವಿಜ್ಞಾನಿ ಡಾ.ಮನೋಜ್ ಕುಮಾರ್ ಟಿ., ಬ್ಲಾಕ್ ಪಂಚಾಯತ್ ಅಧ್ಯಕ್ಷೆ ವಿ.ಪಿ.ಜಾನಕಿ ಮತ್ತು ಎಡಿಸಿ (ಜನರಲ್) ಬೆವಿನ್ ಜಾನ್ ವರ್ಗೀಸ್ ಸಭೆಯಲ್ಲಿ ಉಪಸ್ಥಿತರಿದ್ದರು.