Saturday, July 2, 2022

Latest Posts

ಕೃಷಿ,ತೋಟಗಾರಿಕಾ ಚಟುವಟಿಕೆ, ಉತ್ಪನ್ನ ಸಾಗಾಣಿಕೆಗೆ ನಿರ್ಬಂಧವಿಲ್ಲ: ಬಿ.ಸಿ.ಪಾಟೀಲ್

ಕೋಲಾರ: ಲಾಕ್‌ಡೌನ್ ಸಂದರ್ಭದಲ್ಲಿ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆ, ಕೃಷಿ ಉತಪ್ಪನ್ನಗಳ ಸಾಗಾಣಿಕೆಗೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ ಹಾಗೂ ಬೆಳೆದ ಬೆಳೆಗೆ ಬೆಲೆ ಸಿಗದೇ ಸಂಕಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರ ಕಲ್ಪಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಸೋಮವಾರ ಜಿಲ್ಲಾಡಳಿತ ಭವನದಲ್ಲಿ ವಿವಿಧ ಇಲಾಖಾಧಿಕಾರಿಗಳ ಸಭೆ ನಡೆಸಿದ ಅವರು, ಲಾಕ್‌ಡೌನ್‌ನಿಂದಾಗಿ ರೈತರು ಸಂಕಷ್ಟಕ್ಕೀಡಾಗಿದ್ದು ಆಗಿರುವ ನಷ್ಟ ತುಂಬಿಸಲು ಸರ್ಕಾರ ಸಿದ್ದವಿದೆ ಎಂದರು.
ಸಂಸದ ಎಸ್.ಮುನಿಸ್ವಾಮಿ, ಜಿಲ್ಲೆಯಲ್ಲಿ ಟೊಮೆಟೊ, ಕ್ಯಾಪ್ಸಿಕಾಂ ಸೇರಿದಂತೆ ವಿವಿಧ ತರಕಾರಿ ಬೆಳೆಗಳು ಕಟಾವಿದೆ ಬಂದಿವೆ, ಲಾಕ್‌ಡೌನ್ ಪರಿಸ್ಥಿತಿಯಿಂದ ಕೈಗೆ ಬಂದು ತುತ್ತು ಬಾಯಿಗೆ ಬಾರದಂತಾಗಿದೆ ರೈತರಿಗೆ ಅನುಕೂಲ ಮಾಡಿಕೊಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ರೈತರು ಬಹಳ ಸಂಕಷ್ಟಕ್ಕೀಡಾಗಿದ್ದಾರೆ. ಹಾಪ್ ಕಾಮ್ಸ್ ದರ ನಿಗದಿ ಮಾಡಲು ರೈತರಿಂದಲೂ ಅದೇ ದರಕ್ಕೆ ಖರೀದಿ ಮಾಡಲು ಕ್ರಮಕೈಗೊಳ್ಳಬೇಕು. ಬೇಡಿಕೆಗೂ ಹೆಚ್ಚು ತರಕಾರಿ ಜಿಲ್ಲೆಯಲ್ಲಿ ಬೆಳೆಯುತ್ತಿದ್ದಾರೆ, ರಾಜ್ಯ ಅಲ್ಲದೆ ವಿದೇಶಕ್ಕೆ ತರಕಾರಿ ರಪ್ತಾಗುತ್ತಿದೆ. ಇತ್ತೀಚಿಗೆ ಸಭೆ ಮಾಡಿ ಜಿಲ್ಲೆಗೆ ರೈಲು ಕಳುಹಿಸಲು ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಹೇಳಿದ ಬೆಲೆ ರೈತರು ತರಕಾರಿ ಕೊಡಬೇಕು, ಇಲ್ಲವಾದರೆ ಅದನ್ನು ಕೇಳುವವರು ಇರುವುದಿಲ್ಲ, ನಾನೇ ಖುದ್ದು ಮಾರುಕಟ್ಟೆ ಹೋಗಿ ೬ ಟನ್ ವಿವಿಧ ತರಕಾರಿ ಖರೀದಿ ಮಾಡಿ ಬಡವರಿಗೆ ಹಂಚುವ ಕೆಲಸ ಮಾಡುತ್ತಿದ್ದೇನೆ, ಈ ಕೆಲಸವನ್ನು ರಾಜ್ಯದ್ಯಂತ ಜನಪ್ರತಿನಿಧಿಗಳು ಪ್ರಾರಂಭಿಸಿದರೆ ಸ್ವಲ್ಪ ಪ್ರಮಾಣದಲ್ಲಿ ಸಮಸ್ಯೆ ಬಗೆಹರಿಯುತ್ತದೆ ಎಂದು ತಿಳಿಸಿದರು.
ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಲಾಕ್ ಡೌನ್ ಅದ ಮೇಲೆ ಎಲ್ಲಾ ರೀತಿಯ ನಿಬಂಧಗಳನ್ನು ಸಡಿಲಗೊಳಿಸಲಾಗಿದೆ. ಬಹುತೇಕ ತರಕಾರಿ ಬೆಂಗಳೂರಿಗೆ ಬರುತ್ತಿದೆ. ರೈತರಿಗೆ ಅನುಕೂಲ ಮಾಡಿಕೊಡಬೇಕು. ಮಂಡಿಗಳವರು ನೇರವಾಗಿ ರೈತರಿಂದ ಖರೀದಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಾತನಾಡಿ, ರೈತರು ಬೆಳೆ ನಾಶ ಮಾಡಿರುವ ಕುರಿತು ವರದಿ ತಯಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ರೈತರ ತರಕಾರಿ ಗ್ರಾಹಕರು ಕೊಂಡುಕೊಳ್ಳಲು ನಗರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ರೈತರಿಂದ ಖರೀದಿ ಮಾಡಲು ಬೆಲೆಯಿಲ್ಲ, ಮಧ್ಯವರ್ತಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ, ರೈತರಿಂದ ನೇರವಾಗಿ ಖರೀದಿ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಗಾಯಿತ್ರಿ ಮಾತನಾಡಿ, ಹಾಪ್ ಕಾಮ್ಸ್‌ನವರು ರೈತರಿಂದ ಖರೀದಿ ಮಾಡಲು ನಿಬಂಧ ಇದೆ. ಸಂಸ್ಥೆಯಲ್ಲಿ ನೋಂದಣಿಯಾಗಿರುವ ರೈತರಿಂದ ಮಾತ್ರ ಖರೀದಿ ಮಾಡಲು ಅವಕಾಶ ಇದ್ದು ಬೇಡಿಕೆ ಇರುವಷ್ಟು ರವಾನೆಯಾಗುತ್ತಿದೆ ಎಂದು ವಿವರಿಸಿದರು.
ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೃಷಿ, ತೋಟಗಾರಿಕೆ ಚಟುವಟಿಕೆಗಳು ಚುರುಕಾಗಿ ನಡೆಯಬೇಕು, ಮುಂಗಾರು ಸಂದರ್ಭದಲ್ಲಿ ಬಿತ್ತನೆ ಬೀಜ, ರಸ ಗೊಬ್ಬರ ಕೊರತೆಯಾಗದಂತೆ ದಸ್ತಾನು ಮಾಡಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲೇ ಮಾವು ಹೆಚ್ಚಾಗಿ ಬೆಳೆಯುವುದರಿಂದ ಬೇರೆ ಕಡೆಯಿಂದ ತರಿಸಿಕೊಳ್ಳುವುದರನ್ನು ನಿಲ್ಲಿಸಲಾಗುವುದು, ಕೊರೊನಾಗೂ ಮಾವಿಗೆ ಯಾವುದೇ ಸಂಬಂಧವಿಲ್ಲ, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು, ಇದರಿಂದ ಯಾರು ಸಹ ಕಂಗಾಲಾಗಬೇಕಾಗಿಲ್ಲ ಎಂದರು.
ಅಂತರ ಕಾಯ್ದುಕೊಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಾತನಾಡಿ, ರೈತರಿಕೆ ಯಾವುದೇ ತೊಂದರೆ ನೀಡುವುದಿಲ್ಲ, ಮಾರುಕಟ್ಟೆ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ರೈತರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕರಾದ ಕೆ.ಶ್ರೀನಿವಾಸಗೌಡ, ಕೆ.ವೈ.ನಂಜೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್, ಎಂಎಲ್ಸಿ ಆರ್.ಚೌಡರೆಡ್ಡಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಎಸ್ಪಿಗಳಾದ ಕಾರ್ತಿಕ್‌ರೆಡ್ಡಿ, ಮಹಮದ್ ಸುಚಿತಾ, ಎಚ್ಚುವರಿ ಜಿಲ್ಲಾಧಿಕಾರಿ ಶಿವಸ್ವಾಮಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss