ಹೊಸ ದಿಗಂತ ವರದಿ, ಮಡಿಕೇರಿ:
ಕರ್ನಾಟಕದಲ್ಲಿ ಕೃಷಿ ಕ್ಷೇತ್ರ ಅಭಿವೃದ್ಧಿ ಕಾಣಲು ಇಸ್ರೇಲ್ ಮಾದರಿ ಬೇಕಿಲ್ಲ.ಕೋಲಾರ ಜಿಲ್ಲೆಯ ಮಾದರಿ ಅಳವಡಿಸಿಕೊಂಡರೆ ರೈತರ ಅತ್ಮಹತ್ಯೆ ತಡೆಯಬಹುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಪೊನ್ನಂಪೇಟೆ ಅರಣ್ಯ ಕಾಲೇಜು ಆವರಣದಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಅವರೊಂದಿಗೆ ಬಿದಿರು ಸಸ್ಯ ಕ್ಷೇತ್ರ, ಬಿದಿರು ಸಂಸ್ಕರಣಾ ಮತ್ತು ಬಿದಿರು ಮೌಲ್ಯವರ್ಧನಾ ಘಟಕ ಉದ್ಘಾಟಿಸಿ ಮಾತನಾಡಿದ ಸಚಿವರು, ಅರಣ್ಯ ಇದ್ದರೆ ಮಳೆ, ಮಳೆ ಬಂದಲ್ಲಿ ಸಮೃದ್ಧ ಬೆಳೆ, ಬೆಳೆ ಬೆಳೆದಲ್ಲಿ ಉತ್ತಮ ಬದುಕು ಎಂದು ವರ್ಣಿಸಿದರು.
ಸಾಂಪ್ರದಾಯಿಕ ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆ, ಮೀನುಗಾರಿಕೆ, ತರಕಾರಿ ಹೀಗೆ ಮಿಶ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯವಶ್ಯ. ಆ ಮೂಲಕ ಆರ್ಥಿಕ ಸುಸ್ಥಿರತೆ ಕಂಡುಕೊಳ್ಳಬಹುದೆಂದ ಸಚಿವರು, ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುವ ನಿಟ್ಟಿನಲ್ಲಿ ಇಸ್ರೇಲ್ ಮಾದರಿ ಬೇಕಿಲ್ಲ, ಕೋಲಾರ ಜಿಲ್ಲೆಯ ಮಾದರಿ ಅಳವಡಿಸಿಕೊಂಡರೆ ರೈತರ ಆತ್ಮಹತ್ಯೆ ತಡೆಯಬಹುದು. ಮಂಡ್ಯ ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬನ್ನು ಪ್ರಧಾನ ಹಾಗೂ ವಾರ್ಷಿಕ ಬೆಳೆಯಾಗಿ ಬೆಳೆಯುತ್ತಾರೆ. ಆದರೆ ಕೋಲಾರ ಜಿಲ್ಲೆಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯಲಾಗುತ್ತಿದೆ. ಇದರಿಂದ ರೈತ ಒಂದು ಬೆಳೆಯಲ್ಲಿ ಲಾಭ ದೊರಕದಿದ್ದರೂ ಮತ್ತೊಂದು ಬೆಳೆಯ ಮೂಲಕ ಆರ್ಥಿಕ ಸ್ಥಿರತೆ ಕಂಡುಕೊಳ್ಳುತ್ತಿದ್ದಾನೆಂದು ವಿವರಿಸಿದರು.
ಅರಣ್ಯ ಸಚಿವ ಆನಂದ್ ಸಿಂಗ್ ಮಾತನಾಡಿ, ಪೊನ್ನಂಪೇಟೆ ಅರಣ್ಯ ಕಾಲೇಜಿನಲ್ಲಿ ಶಿಕ್ಷಣ ಪಡೆದು ವಿವಿಧ ಉನ್ನತ ಹುದ್ದೆಗಳನ್ನು ಅಲಂಕರಿಸಿದವರು ಇಲ್ಲಿಯೂ ಇದ್ದಾರೆ. ತಾವು ಅರಣ್ಯ ಸಂರಕ್ಷಣೆಯ ಜೊತೆಗೆ ಅರಣ್ಯದಲ್ಲಿ ವಾಸಿಸುವ ಹಾಡಿಯ ಜನರ ಬದುಕು ಅರ್ಥ ಮಾಡಿಕೊಂಡು ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭ ಪೆÇನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ವತಿಯಿಂದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಕೊಡಗು ಜಿಲ್ಲೆಯ ಸಾಂಪ್ರದಾಯಿಕ ಒಡಿಕತ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ. ಬೋಪಯ್ಯ, ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ.ಜಿ. ಕುಶಾಲಪ್ಪ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.