Tuesday, August 16, 2022

Latest Posts

ಕೃಷಿ ಪರಿಕರಗಳ ಎಂಆರ್ ಪಿ ಬೆಲೆ ನಮೂದಾಗಲಿ: ಸಂಸತ್ತಿನಲ್ಲಿ ಸಂಸದ ಸಿದ್ದೇಶ್ವರ್ ಒತ್ತಾಯ

ದಾವಣಗೆರೆ: ದೇಶದ ಎಲ್ಲಾ ಟ್ರಾಕ್ಟರ್ ಉತ್ಪಾದಕರಿಗೆ ಎಂಆರ್‌ಪಿ ಬೆಲೆ ನಮೂದಿಸುವಂತೆ ಸರ್ಕಾರಿ ಆದೇಶವಾಗಬೇಕೆಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಬುಧವಾರ ಸಂಸತ್ತಿನ ಗಮನ ಸೆಳೆದರು.
ಟ್ರಾಕ್ಟರ್ ಮಾರಾಟ ಪ್ರಕ್ರಿಯೆ ಪಾರದರ್ಶಕತೆಯಿಂದ ಕೂಡಿಲ್ಲ ಎಂಬ ವಿಷಯದ ಬಗ್ಗೆ ಈ ಹಿಂದೆ ಧ್ವನಿ ಎತ್ತಿದ್ದ ಸಂಸದ ಸಿದ್ದೇಶ್ವರ, ಕೃಷಿ ಸಚಿವಾಲಯದಿಂದ ದೇಶದ ಎಲ್ಲಾ ಟ್ರಾಕ್ಟರ್ ಉತ್ಪಾದಕರಿಗೆ ಎಂಆರ್‌ಪಿ ಬೆಲೆ ನಮೂದಿಸುವಂತೆ ಸೂಚನೆ ಪತ್ರ ಹೊರಡಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ಪುನಃ ಲೋಕಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಂಸದರು, ಎಲ್ಲಾ ಟ್ರಾಕ್ಟರ್ ತಯಾರಿಕರಿಗೆ ಸರ್ಕಾರದ ವತಿಯಿಂದ ಎಂಆರ್‌ಪಿ ನಮೂದಿಸುವಂತೆ ಪತ್ರ ಬರೆದಿರುವುದು ಅಭಿನಂದನಾರ್ಹ. ಆದರೆ, ಈ ವಿಷಯವಾಗಿ ಸರ್ಕಾರಿ ಆದೇಶವಾಗಬೇಕು. ಟ್ರಾಕ್ಟರ್ ಹಾಗೂ ಕೃಷಿ ಪರಿಕರಗಳು ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗದಂತೆ ಕಡಿವಾಣ ಹಾಕಬೇಕು ಎಂದರು.
ಕಾರು ತಯಾರಿಸುವ ಎಲ್ಲಾ ಕಂಪನಿಯವರು ಎಂಆರ್‌ಪಿ ಬೆಲೆಯನ್ನು ಅವರ ಸ್ವಂತ ವೆಬ್‌ಸೈಟ್‌ಗಳಲ್ಲಿ ನಮೂದಿಸುತ್ತಿದ್ದಾರೆ. ಹೀಗಿರುವಾಗ ಇದೇ ಮಾನದಂಡ ಟ್ರಾಕ್ಟರ್ ತಯಾರಕರಿಗೆ ಏಕೆ ಅನ್ವಯಿಸುತ್ತಿಲ್ಲ? ಪವರ್ ಟಿಲ್ಲರ್, ಕಂಬೈನ್ಡ್ ಹಾರ್ವೆಸ್ಟರ್ಸ್, ರೋಟೋವೇಟರ್ಸ್ ಮತ್ತು ಭತ್ತದ ನಾಟಿ ಯಂತ್ರಗಳ ತಯಾರಕರೂ ಕೂಡ ಎಂಆರ್‌ಪಿ ಬೆಲೆಯನ್ನು ನಮೂದಿಸುವಂತಾಗಬೇಕು. ಏನಾದರೂ ಲೋಪ ಕಂಡುಬಂದಲ್ಲಿ ಅಂತಹವರ ಮೇಲೆ ತೀವ್ರತರನಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಂಆರ್‌ಪಿ ನಿಗದಿಯಲ್ಲಿ ವಂಚನೆ ಮಾಡುವುದು ಗುರುತರವಾದ ಅಪವಾದ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ವಂಚನೆ ಮಾಡುವ ಟ್ರಾಕ್ಟರ್ ಹಾಗೂ ಕೃಷಿ ಪರಿಕರಗಳ ತಯಾರಕರ ಮೇಲೆ ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಗ್ರಾಹಕ ರಕ್ಷಣೆ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಕೃಷಿ ಸಚಿವಾಲಯವು ಸರ್ಕಾರಿ ಆದೇಶ ಹೊರಡಿಸಬೇಕು ಎಂದು ಅವರು ಸಂಸತ್ತಿನ ಗಮನಕ್ಕೆ ತಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss