ಹೊಸದಿಗಂತ ವರದಿ, ಮೈಸೂರು:
ಕೇಂದ್ರ ಸರ್ಕಾರ ಕೃಷಿ ಮಸೂದೆ ಜಾರಿಗೆ ತರುವ ಮೂಲಕ ಬಂಡವಾಳ ಶಾಹಿಗಳ ಕೈಗೊಂಬೆಯಾಗಿದೆ ಎಂದು ವಿಪಕ್ಷಗಳು ಹಾಗೂ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಮಾಡುತ್ತಿರುವ ಆರೋಪಗಳು ಸುಳ್ಳಾಗಿವೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಮಂತ್ರಾಲಯದ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಶನಿವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿರುವ ರೈತರ ಆದಾಯ ದ್ವಿಗುಣಗೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಆ ಮೂಲಕ ರೈತರಿಗೆ ಬೆಂಬಲ ನೀಡಿದ್ದಾರೆ. ರೈತರು ಎಪಿಎಂಸಿ ಕೈಗೊಂಬೆಯಾಗಿ ಇರೋದು ಬೇಡ. ರೈತರು ಸ್ವತಂತ್ರವಾಗಿ ಬೆಳೆ ಮಾರಾಟ ಮಾಡಲು ಅವಕಾಶ ಕೊಟ್ಟಿದ್ದೇವೆ. ಹೀಗಿರುವಾಗ ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಕೈಗೊಂಬೆಯಾಗುತ್ತಿದೆ ಎನ್ನುವುದು ಶುದ್ಧ ಸುಳ್ಳು ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ, ರೈತನಿಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ. ರೈತರು ಈಗ ಸರ್ಕಾರದ ಕೈಗೊಂಬೆಯಾಗಿದ್ದಾರೆ. ಬೇಕಾದವರಿಗೆ ಬೆಳೆ ಮಾರಾಟ ಮಾಡಲು ಸ್ವಾತಂತ್ರ್ಯ ಇಲ್ಲವಾಗಿದೆ. ರೈತನಿಗೆ ಬೆಳೆದ ಬೆಳೆಯನ್ನ ಮುಕ್ತವಾಗಿ ಮಾರಲು ಸ್ವಾತಂತ್ರ್ಯ ನೀಡುತ್ತಿದ್ದೇವೆ. ತನ್ನ ಬೆಳೆಗೆ ಯಾರಾದರೂ ಹೆಚ್ಚು ಬೆಲೆ ಕೊಡುತ್ತಾರೆ ಎಂದರೆ ಕೊಡಲಿ ಬಿಡಿ. ಸುಮ್ಮನೆ ಯಾಕೇ ಹಠ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದರು.
ಬಿಜೆಪಿಯಿಂದ ಸಚಿವರಿಗೆ ಸ್ವಾಗತ: ಇದಕ್ಕೂ ಮುನ್ನಾ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ರಾಜೀವ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಎ.ಹೇಮಂತ್ಕುಮಾರ್ ಮತ್ತಿತರರು ಸ್ವಾಗತಿಸಿದರು.