Sunday, August 14, 2022

Latest Posts

ಕೃಷಿ ಮಸೂದೆ ರೈತ ವಿರೋಧಿ ಎಂದಿಲ್ಲ: ಅಕಾಲಿ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್

ಹೊಸದಿಲ್ಲಿ: ಕೇಂದ್ರ ಸರಕಾರ ಮಂಡಿಸಿದ ಕೃಷಿ ಸುಧಾರಣಾ ತಿದ್ದುಪಡಿ ಮಸೂದೆಗಳು ರೈತ ವಿರೋಧಿ ಎಂದು ಆರೋಪಿಸಿ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಶಿರೋಮಣಿ ಅಕಾಲಿ ದಳದ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ಈಗ , ಈ ಮಸೂದೆ ರೈತ ವಿರೋಧಿ ಎಂದು ತಾನು ಹೇಳಿಲ್ಲ ಎಂಬುದಾಗಿ ಉಲ್ಟಾ ಹೊಡೆದಿದ್ದಾರೆ.
ಪಂಜಾಬ್ ರಾಜಕೀಯದ ಆಂತರಿಕ ಕಾರಣಗಳಿಗಾಗಿ ಅಕಾಲಿದಳ ಈ ಮಸೂದೆಯನ್ನು ವಿರೋಧಿಸಿದೆ ಎನ್ನಲಾಗಿದ್ದು, ಪಕ್ಷದ ಸೂಚನೆಯಂತೆ ಕೌರ್ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ಈ ಮಸೂದೆಗಳು ರೈತ ವಿರೋಧಿ ಮಸೂದೆ ಎಂದು ನಾನು ಹೇಳುತ್ತಿಲ್ಲ. ಆದರೆ ಪಂಜಾಬ್‌ನ ರೈತರು ಹೀಗೆ ಅಭಿಪ್ರಾಯಪಡುತ್ತಿರುವ ಕಾರಣ ಇದರ ಬಗ್ಗೆ ಸಮಗ್ರ ಚರ್ಚೆಯಾಗಬೇಕು, ಅವರಸ ಬೇಡ ಎಂಬುದು ಮಾತ್ರ ತನ್ನ ನಿಲುವು ಅಗಿತ್ತು ಎಂದು ಅವರು ಸಂದರ್ಶನವೊಂದರಲ್ಲಿ ಸಮಜಾಯಿಷಿ ನೀಡಿದ್ದಾರೆ.
ಕೇಂದ್ರ ಸರಕಾರ ಮಂಡಿಸಿದ ೩ ಮಸೂದೆಗಳು ರೈತ ವಿರೋಧಿ ಎಂದು ವೈಯಕ್ತಿಕವಾಗಿ ಅನಿಸುತ್ತಿದೆಯೇ ಎಂಬ ಪ್ರಶ್ನೆಗೆ, ಅದು ಪ್ರಮುಖ ವಿಷಯವೇ ಅಲ್ಲ. ಮಸೂದೆಗಳು ರೈತರ ಪ್ರಯೋಜನಕ್ಕಾಗಿ ಸಂಸತ್ತಿನಲ್ಲಿ ಮಂಡನೆಯಾಗಿವೆ ಎಂದು ಕೌರ್ ಹೇಳಿದ್ದಾರೆ. ಆದರೆ ಕೌರ್ ಅವರ ರಾಜಿನಾಮೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಸಲಹೆಯಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈಗಾಗಲೇ ಅಂಗೀಕರಿಸಿದ್ದಾರೆ.ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್ ಅವರಿಗೆ ಕೌರ್ ಅವರ ಖಾತೆಯ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಇದೀಗ ಸಂಸತ್ತಿನಲ್ಲಿ ಅಂಗೀಕಾರ ಪಡೆದಿರುವ ಕೃಷಿ ಮಸೂದೆಗಳು ರೈತರ ಬದುಕಿನಲ್ಲಿ ಕ್ರಾಂತಿಕಾರಕ ಮಾರ್ಪಾಡು ತರಲಿದ್ದು, ರೈತರು ದಲ್ಲಾಳಿಗಳ ಹಾವಳಿಯಿಂದ ಮುಕ್ತಿ ಪಡೆದು ತಮ್ಮ ಉತ್ಪನ್ನಗಳಿಗೆ ಗರಿಷ್ಠ ಬೆಲೆ ಇರುವ ಮಾರುಕಟ್ಟೆಯಲ್ಲಿ ಮಾರಲು ಸ್ವಾತಂತ್ರ್ಯ ಪಡೆದಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss