ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇಂದು ಬಿಹಾರದಲ್ಲಿ 9 ಹೆದ್ದಾರಿ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ ವೇಳೆ ಮಾತನಾಡಿದ ನಿತೀಶ್ ಕುಮಾರ್, ಕೇಂದ್ರದ ಕೃಷಿ ವಿಧೇಯಕ ದೇಶದ ರೈತ ಸಮುದಾಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಭಾನುವಾರ ರಾಜ್ಯಸಭೆಯಲ್ಲಿ ಕೃಷಿ ವಿಧೇಯಕದ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ, ವಿಪಕ್ಷಗಳು ನಡೆದುಕೊಂಡ ರೀತಿಯನ್ನು ನಿತೀಶ್ ಕುಮಾರ್ ಖಂಡಿಸಿದ್ದು, ತಮ್ಮ ವಿರೋಧವನ್ನು ದಾಖಲಿಸಲು ವಿಪಕ್ಷಗಳಿಗೆ ಹಲವು ಸಂಸದೀಯ ದಾರಿಗಳಿವೆ. ಅದನ್ನು ಬಿಟ್ಟು ಉಪ ಸಭಾಪತಿ ಮುಂದೆಯೇ ಅಸಭ್ಯ ವರ್ತನೆ ತೋರುವುದು ಖಂಡನಾರ್ಹ ಎಂದು ಟೀಕಿಸಿದರು.