ಮೈಸೂರು: ರಾಜ್ಯದ ಭೂ ಅಭಿವೃದ್ದಿ ಬ್ಯಾಂಕ್ಗಳಲ್ಲಿ ಕೃಷಿ ಸಾಲ ಪಡೆದಿದ್ದ ರೈತರಿಗೆ ಬಡ್ಡಿ ಮನ್ನಾ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತು. ರೈತರು ಕೊರೋನಾ ಸಂಕಷ್ಟದಲ್ಲಿ ಸಿಲುಕಿದ್ದು, ಸಾಲದ ಅಸಲು ಮತ್ತು ಬಡ್ಡಿ ಪಾವತಿಸಲು ಸಾದ್ಯವಾಗುತ್ತಿಲ್ಲದ ಕಾರಣ ಈ ಯೋಜನೆಯ ಅವಧಿಯನ್ನು 2021ರ ಮಾರ್ಚ್ 31ರ ತನಕ ಮುಂದೂಡುವoತೆ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ಗೆ ಕರ್ನಾಟಕ ರಾಜ್ಯ ರೈತ ವಿರೋಧಿ ಕಾಯ್ದೆ ಹೋರಾಟ ಸಮಿತಿ ರೈತ ಮುಖಂಡರು ಒತ್ತಾಯ ಪತ್ರ ಸಲ್ಲಿಸಿದರು.
ಬುಧವಾರ ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ರೈತ ಮುಖಂಡರಿoದ ಒತ್ತಾಯ ಪತ್ರ ಸ್ವೀಕರಿಸಿದ ಸಚಿವರು, ಆಗಸ್ಟ್ 31ರ ತನಕ ಈಗಾಗಲೇ ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ಅವಧಿ ವಿಸ್ತರಿಸಿದೆ. ಆದರೆ ಡಿಸೆಂಬರ್ ತನಕ ವಿಸ್ತರಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡಬಾರದು, ಅದು ರೈತರಿಗೆ ಮಾರಕವಾಗುತ್ತದೆ. ಈ ಬಗ್ಗೆ ಸರ್ಕಾರದ ನಿರ್ಧಾರ ಬದಲಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದಾಗ, ಈಗಾಗಲೇ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ. ಸಾಧಕ-ಬಾಧಕಗಳ ಚರ್ಚಿಸಿ, ಕೃಷಿ ಕ್ಷೇತ್ರಕ್ಕೆ ತೊಂದರೆ ಬಾರದಂತೆ ಮತ್ತೊಂದು ಭಾರಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದರು.
ಎಪಿಎಂಸಿ ತಿದ್ದುಪಡಿ ಕಾಯ್ದೆಯಲ್ಲಿ ಹಲವಾರು ಲೋಪದೋಷಗಳಿವೆ. ಮುಂದಿನ ದಿನಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ರೈತರನ್ನು ರಕ್ಷಿಸುವ ಯಾವುದೇ ಕ್ರಮಗಳು ಈ ಕಾಯ್ದೆಯಲ್ಲಿಲ್ಲ ಅದಕ್ಕಾಗಿ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಬಾರದು ಎಂದು ರೈತ ಮುಖಂಡರು ಸಚಿವರನ್ನು ಒತ್ತಾಯಿಸಿದರು.
ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿ ಮಾಡಿ ಖಾಸಗೀಕರಣ ಮಾಡಲು ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳಿರುವುದರಿಂದ ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು. ಖಾಸಗೀಕರಣವಾದರೆ ರೈತರ ಪಂಪ್ಸೆಟ್ಗಳಿಗೆ ನೀಡುವ ಉಚಿತ ವಿದ್ಯುತ್ ನಿಲ್ಲಿಸಿ ಮೀಟರ್ ಅಳವಡಿಸಲಾಗುತ್ತದೆ. ಆಗ ರೈತರು ಕೃಷಿ ಮಾಡುವುದೇ ದೊಡ್ಡ ಸಮಸ್ಯೆಯಾಗುತ್ತದೆ. ಆದ್ದರಿಂದ ಕೇಂದ್ರದ ನಿರ್ದಾರವನ್ನು ವಿರೋಧಿಸಬೇಕು ಎಂದು ಒತ್ತಾಯಿಸಲಾಯಿತು.
ಕಳೆದ ಒಂದು ತಿಂಗಳಿನಿoದಲೂ ರಾಜ್ಯಾದ್ಯಂತ ರೈತರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ, ರೈತರ ಒತ್ತಾಯಗಳನ್ನು ಪರಿಗಣಿಸಬೇಕು ಇಲ್ಲದಿದ್ದರೆ ಕೊರೋನಾ ಸಂಕಷ್ಟವನ್ನು ಲೆಕ್ಕಿಸದೆ ಹೋರಾಟ ನಡೆಸಬೇಕಾಗುತ್ತದೆ ಎಂದು ಸಮಿಯ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸಚಿವರಿಗೆ ತಿಳಿಸಿದರು.
ಈ ವೇಳೆ ರೈತ ಮುಖಂಡರುಗಳಾದ ಅತ್ತಹಳ್ಳಿದೇವರಾಜ್, ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಬರಡನಪುರ ನಾಗರಾಜ್, ರೇವಣ್ಣ, ರಾಮೇಗೌಡ, ವೆಂಕಟೇಶ್, ರಾಜು, ಮಂಜುನಾಥ್, ಆರ್.ಕೆ.ಧನಂಜಯ್ ಕುಮಾರ್ ಇನ್ನು ಮುಂತಾದವರಿದ್ದರು.