ಹೊಸ ದಿಗಂತ ವರದಿ, ಮಂಗಳೂರು:
ಕೆಂಜಾರು ಪೇಜಾವರದಲ್ಲಿರುವ ಕಪಿಲಾ ಗೋ ಶಾಲೆ ತೆರವುಗೊಳಿಸುವಂತೆ ಕಂದಾಯ ಮತ್ತು ಕೆಐಎಡಿಬಿ ಅಧಿಕಾರಿಗಳು ಧಮ್ಕಿ ಹಾಕುತ್ತಿದ್ದಾರೆ. ಹಿಂದುತ್ವ ಮತ್ತು ಗೋವಿನ ಹೆಸರಿನಲ್ಲಿ ಚುನಾವಣೆ ಗೆದ್ದು ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರ ಕಪಿಲಾ ಗೋಶಾಲೆ ಉಳಿಸಿಕೊಡಬೇಕು ಎಂದು ಅರಸೀಕೆರೆ ಕಾಳಿಕಾ ಮಠದ ಶ್ರೀ ರಿಷಿಕುಮಾರ ಸ್ವಾಮೀಜಿ ಮನವಿ ಮಾಡಿದರು.
ಕೆಂಜಾರು ಬಳಿ 8 ವರ್ಷದಿಂದ ಇರುವ ಗೋ ಶಾಲೆಯ ಜಮೀನನ್ನು ಕೋಸ್ಟ್ಗಾರ್ಡ್ಗೆ ಸ್ವಾಧೀನಪಡಿಸಿಕೊಡುವುದಕ್ಕಾಗಿ ಕೆಐಎಡಿಬಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕಾನೂನುಬಾಹಿರವಾಗಿ ವರ್ತಿಸುತ್ತಿದ್ದಾರೆ. ಗೋಶಾಲೆಯನ್ನು ನಡೆಸುತ್ತಿರುವವರಿಗೆ, ಕೆಲಸಗಾರರಿಗೆ ಬೆದರಿಕೆ ಹಾಕಲಾಗುತ್ತಿದೆ. ಗೋವುಗಳ ಸಂರಕ್ಷಣೆಯ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು, ಸರಕಾರ, ಮಠಾಧೀಶರು, ಸಂಘಟನೆಗಳು ಈ ಗೋಶಾಲೆ ಉಳಿಸಲು ಮುಂದಾಗಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಒತ್ತಾಯಿಸಿದರು.
ಕಪಿಲಾ ಪಾರ್ಕ್ ಎಂಬ ಹೆಸರಿನಲ್ಲಿ ಪ್ರಕಾಶ್ ಶೆಟ್ಟಿ ಅವರು ಕಳೆದ 8 ವರ್ಷಗಳಿಂದ ಸ್ವಂತ ಖರ್ಚಿನಲ್ಲಿ ಗೋಶಾಲೆ ನಡೆಸುತ್ತಿದ್ದಾರೆ.
2 ಗೋವುಗಳಿಂದ ಆರಂಭಗೊಂಡ ಗೋಶಾಲೆಯಲ್ಲಿ ಪ್ರಸ್ತುತ 300 ಗೋವುಗಳಿವೆ. ಆದರೆ ಈಗ ಗೋಶಾಲೆಯನ್ನು ಉಳಿಸುವುದಕ್ಕೆ ಹೋರಾಡುವ ಸ್ಥಿತಿ ಉಂಟಾಗಿದೆ. ಸರಕಾರ ಗೋಹತ್ಯೆ ನಿಷೇಧ ಮಾಡುವ ಬದಲು ಗೋಶಾಲೆಯನ್ನು ನಿಷೇಧ ಮಾಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಸಂಸದ ನಳಿನ್ ಕುಮಾರ ಕಟೀಲ್ ಅವರು ಕೂಡ ಈ ಬಗ್ಗೆ ಗಮನಹರಿಸಬೇಕು ಎಂದು ಸ್ವಾಮೀಜಿ ಹೇಳಿದರು.
ಕಪಿಲಾ ಪಾರ್ಕ್ ಗೋಶಾಲೆ ಟ್ರಸ್ಟಿ ಪ್ರಕಾಶ್ ಶೆಟ್ಟಿ ಮಾತನಾಡಿ, ಕೆಂಜಾರಿನ ಗೋಶಾಲೆಯಲ್ಲಿ ಅಪರೂಪದ 60 ಕಪಿಲಾ ತಳಿಯ ಗೋವುಗಳಿವೆ. ಮಲೆನಾಡು ಗಿಡ್ಡ, ಕಾಸರಗೋಡು ಗಿಡ್ಡ ಮೊದಲಾದ ದೇಸೀ ತಳಿಗಳಿವೆ. ಗೋಶಾಲೆಗೆ ಬೇಕಾದ ಜಾಗವನ್ನು ಖರೀದಿಸಿ ಗೋವುಗಳನ್ನು ನಿಸ್ವಾರ್ಥವಾಗಿ ಸಂರಕ್ಷಿಸಿಕೊಂಡು ಬಂದಿದ್ದೇನೆ. ಕಳೆದ 7 ತಿಂಗಳುಗಳಿಂದ ಪೇಜಾವರ ಗೋ ಸೇವಾ ಸಮಿತಿ ಅಡಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಎಬಿವಿಪಿ ಕಾರ್ಯಕರ್ತರ ಸುಮೇದ ಟ್ರಸ್ಟ್ ಎಂಬ ಸಂಸ್ಥೆ ಗೋವುಗಳ ನಿರ್ವಹಣೆ ಮಾಡುತ್ತಿದೆ ಎಂದು ತಿಳಿಸಿದರು.
ಗೋಶಾಲೆ ಇರುವ ಪ್ರಕಾಶ್ ಶೆಟ್ಟಿ ಅವರ ಸ್ವಂತ ಭೂಮಿಯನ್ನು ಕೋರ್ಸ್ಗಾರ್ಡ್ಗೆ ಮಂಜೂರು ಮಾಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಅಧಿಕಾರಿಗಳು ಯಾವುದೇ ನಿಯಮ ಪಾಲನೆ ಮಾಡುತ್ತಿಲ್ಲ. ಸರಿಯಾದ ಮಾಹಿತಿಯನ್ನು ಕೂಡ ನೀಡದೆ ಬೆದರಿಕೆ ಹಾಕಲಾಗುತ್ತಿದೆ. ಕೆಂಜಾರು ಪ್ರದೇಶದ 986 ಎಕರೆ ಪ್ರದೇಶದಲ್ಲಿ 160 ಎಕರೆಯನ್ನು ಕೋಸ್ಟ್ಗಾರ್ಡ್ಗೆ ನೀಡಲು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಇದು ಸೂಕ್ಷ್ಮ ಪರಿಸರವಾಗಿದ್ದು ಅಣೆಕಟ್ಟು, ಪ್ರಮುಖ ಕಂಪೆನಿಗಳ ಬೃಹತ್ ಪೈಪ್ಲೈನ್ಗಳು ಹಾದು ಹೋಗಿವೆ. ಗೋಶಾಲೆ ೩೩ ಸೆಂಟ್ಸ್ ಜಾಗದಲ್ಲಿದ್ದು ಅದು ಗೋವುಗಳಿಗೆ ಯೋಗ್ಯವಾದ ಸ್ಥಳವಾಗಿದೆ ಎಂದು ಪ್ರಕಾಶ್ ಶೆಟ್ಟಿ ಹೇಳಿದರು.
ಅಧಿಕಾರಿಗಳ ವಜಾಗೊಳಿಸಿ
ಒಂದು ವೇಳೆ ಗೋಶಾಲೆ ಇರುವ ಜಾಗ ಕೋಸ್ಟ್ಗಾರ್ಡ್ಗೆ ನೀಡಲೇಬೇಕು ಎಂದಿದ್ದಲ್ಲಿ ಕಾನೂನು ಪ್ರಕಾರ ನೋಟಿಸ್ ನೀಡಿ, ಪರಿಹಾರ, ಸಮಯವಾಕಾಶ ಒದಗಿಸಿ ಅಧಿಕಾರಿಗಳು ಜಾಗ ಪಡೆಯಬಹುದಿತ್ತು. ಅದಕ್ಕೆ ಬದಲಾಗಿ ಗೋವುಗಳನ್ನು ಲಾರಿಯಲ್ಲಿ ತುಂಬಿಸಿ ಕೊಂಡೊಯ್ಯುತ್ತೇವೆ, ಗೋಶಾಲಾ ಕಟ್ಟಡ ಒಡೆಯುತ್ತೇವೆ ಎಂದು ಧಮ್ಕಿ ಹಾಕುವುದು ಸರಿಯಲ್ಲ. ಗೋವಿನ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರದ ಅಧಿಕಾರಿಗಳು ಈ ರೀತಿ ಮಾಡುತ್ತಿರುವುದು ಅಕ್ಷಮ್ಯ. ಬೆದರಿಕೆ ಹಾಕುತ್ತಿರುವ ಮಂಗಳೂರು ಎಸಿ ಮದನ್ ಮೋಹನ್ ಮತ್ತು ಕೆಐಎಡಿಬಿ ಅಧಿಕಾರಿ ಬಿನೋಯ್ ಅವರನ್ನು ಸರಕಾರ ತಕ್ಷಣ ವಜಾ ಮಾಡಬೇಕು ಎಂದು ರಿಷಿಕುಮಾರ ಸ್ವಾಮೀಜಿ ಆಗ್ರಹಿಸಿದರು.