ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನು ಕೆ.ಆರ್. ಎಸ್ ದಕ್ಷಿಣ ದ್ವಾರದ ಮುಂಭಾಗ ನಿರ್ಮಿಸಲು ೮.೫೦ ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಪೂರ್ಣಗೊಳ್ಳಿಲಿದೆ ಎಂದು
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಶುಕ್ರವಾರ ಮೈಸೂರಿನ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಭೇಟಿ ಮಾಡಿ ಜಲಸಂಪನ್ಮೂಲ ಇಲಾಖೆಯ ಅಭಿವೃದ್ಧಿ ಯೋಜನೆಗಳಿಗೆ ಮಾರ್ಗದರ್ಶನ ಸಲಹೆ ನೀಡುವಂತೆ ಮನವಿ ಮಾಡಿ ಫಲಸಮರ್ಪಣೆ ನೀಡಿ ಆಶೀರ್ವಾದ ಪಡೆದರು. ಬಳಿಕ ಮಾತನಾಡಿ, ರಾಜ್ಯದಲ್ಲಿ ನೀರಾವರಿ, ಹೈನುಗಾರಿಕೆ, ಕೃಷಿ ಪ್ರಧಾನವಾಗಿ ಇನ್ನೂ ಸಮೃದ್ಧಿಯಿಂದ ಉಳಿದಿದೆ ಎಂದರೆ, ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪರಿಕಲ್ಪನೆ ಮತ್ತು ಕೊಡುಗೆಯೇ ಮುಖ್ಯ ಕಾರಣ. ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ಕಾವೇರಿ ನೀರನ್ನು ಹರಿಸಿ ಕೋಟ್ಯಾಂತರ ಜನರ ಪಾಲಿನ ಬದುಕಿನ ಕಷ್ಟದ ಕಣ್ಣೀರನ್ನು ಒರೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್.ಎಂ ವಿಶ್ವೇಶ್ವರಯ್ಯ ಅವರ ಪ್ರತಿಮೆಗಳನ್ನು ಕೆ.ಆರ್. ಎಸ್ ದಕ್ಷಿಣ ದ್ವಾರದ ಮುಂಭಾಗ ನಿರ್ಮಿಸಲಾಗುತ್ತಿದೆ ಎಂದರು.
ನದಿ ತೀರವನ್ನು ಕಾಪಾಡುವುದು, ನೀರಿನ ಪ್ರಮಾಣ ಸಂರಕ್ಷಣೆ, ರೈತರ ಸಮಿತಿ ರಚನೆ, ಮಾಲಿನ್ಯ ಮುಕ್ತ ಕಾಪಾಡುವಲ್ಲಿ ಮತ್ತು ಕೆರೆಗಳಿಗೆ ನೀರು ತುಂಬಿಸುವುದು ದೇಶದ ಬೆನ್ನೆಲುಬು ರೈತನ ಹಿತ ಕಾಪಾಡುವಲ್ಲಿ ಯೋಜನೆ ರೂಪಿಸಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ವಿಶೇಷಾಧಿಕಾರಿ ರುದ್ರಯ್ಯ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಶಂಕರ್ ಎಸ್ ಎನ್, ಕಾವೇರಿ ನೀರಾವರಿ ನಿಗಮದ ಮುಖ್ಯನಿರ್ದೇಶಕ ಜಯಪ್ರಕಾಶ್, ಅರಮನೆ ಮಂಡಳಿಯ ನಿರ್ದೇಶಕ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.