Tuesday, June 28, 2022

Latest Posts

ಕೆಆರ್ ಎಸ್ ಬೃಂದಾವನ ವಿಶ್ವದರ್ಜೆಗೇರಿಸಲು ಚಿಂತನೆ: ಮುಖ್ಯಮಂತ್ರಿ ಯಡಿಯೂರಪ್ಪ

ಮಂಡ್ಯ: ಕೆಆರ್‍ಎಸ್ ಬೃಂದಾವನವನ್ನು ವಿಶ್ವದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶ್ರೀರಂಗಪಟ್ಟಣದ ಕೃಷ್ಣರಾಜಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷ್ಣರಾಜಸಾಗರ ಜಲಾಶಯಕ್ಕೆ ಬೃಂದಾವನ ಉದ್ಯಾನ ಮೆರಗು ತಂದಿದ್ದು, ಸೌಂದರ್ಯ ಹೆಚ್ಚಿಸಿದೆ. ಇಲ್ಲಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ್ದರಿಂದ ಇದನ್ನು ವಿಶ್ವ ದರ್ಜೆಗೇರಿಸಲು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಕ್ರಸ್ಟ್ ಗೇಟ್‍ಗಳ ಅಭಿವೃದ್ಧಿ
ಜಲಾಶಯದ ಹಳೆಯ ಕ್ರಸ್ಟ್‍ಗೇಟ್‍ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸುಮಾರು 8.40 ಕೋಟಿ ರೂ. ವೆಚ್ಚದಲ್ಲಿ 16 ಗೇಟ್‍ಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
28 ನೀರಾವರಿ ಯೋಜನೆ ಕಾಮಗಾರಿ ಪ್ರಗತಿ
ನಮ್ಮ ಸರ್ಕಾರ ರಾಜ್ಯದಲ್ಲಿ ನೀರಾವರಿ ಯೋಜನೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು 74 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರು, ಏತ ನೀರಾವರಿ, ಕೃಷಿ ಚಟುವಟಿಕೆಗಳಿಗೆ ನೀರೊದಗಿಸುವ ಹಾಗೂ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ 28 ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಈಗಾಗಲೇ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಪ್ರಾರಂಭಕ್ಕೆ ಕ್ರಮ
ಕಾವೇರಿ ನದಿ ನೀರು ಸಂರಕ್ಷಿಸಿ ವಿದ್ಯುತ್ ಉತ್ಪಾದನೆ, ಕೃಷಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕೆ ರೂಪಿಸಲಾಗಿರುವ ಮೇಕೆದಾಟು ಯೋಜನೆ ಪ್ರಾರಂಭಕ್ಕೆ ಕ್ರಮ ವಹಿಸಲಾಗುವುದು. ಈಗಾಗಲೇ ಈ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ಅನುಮತಿ ಪಡೆದು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಎಲ್ಲ ಜಲಾಶಯಗಳು ಭರ್ತಿ
ರಾಜ್ಯದ ಎಲ್ಲ ಜಲಾಶಯಗಳು, ಕೆರೆ-ಕಟ್ಟೆಗಳು ತುಂಬಿವೆ. ಅದರಂತೆ ಕೆಆರ್‍ಎಸ್ ಜಲಾಶಯ ನಿರ್ಮಾಣವಾದಾಗಿನಿಂದ ಸುಮಾರು 36 ಬಾರಿ ತುಂಬಿದೆ. ಕಳೆದ 3 ವರ್ಷಗಳಿಂದ ಸತತವಾಗಿ ಗರಿಷ್ಠ ಮಟ್ಟ ತುಂಬಿದ್ದು, ಈ ಭಾಗದ ಜನರ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ನೀರೊದಗಿಸುತ್ತಾ ಬಂದಿದೆ. ಜಲಾಶಯಕ್ಕೆ ನಾನು 5ನೇ ಬಾರಿ ಬಾಗಿನ ಅರ್ಪಿಸಿದ್ದು, ಸಂತಸ ತಂದಿದೆ ಎಂದರು. ಈ ಬಾರಿ ಉತ್ತಮ ಮಳೆಯಾಗಿದ್ದು, ಬೆಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ಕೆಲವು ಕಡೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಉಂಟಾಗಿದೆ. ಆ ಭಾಗದ ಜನರಿಗೆ ಪರಿಹಾರ ವಿತರಿಸಲು ಸರ್ಕಾರ ಈಗಾಗಲೇ ಕ್ರಮ ವಹಿಸಿದೆ ಎಂದರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಪಂ ಸಿಇಒ ಎಂ.ಎಸ್.ಜುಲ್‍ಫಿಖಾರ್ ಉಲ್ಲಾ, ತಹಸಿಲ್ದಾರ್ ರೂಪ ಸೇರಿದಂತೆ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss