ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿ ದಿನಾಂಕವನ್ನು ಒಂದು ತಿಂಗಳುಗಳ ಕಾಲ ವಿಸ್ತರಿಸಿ ಕೇಂದ್ರ ಶಿಕ್ಷಣ ಸಚಿವಾಲಯಯದ ವಿಶ್ವವಿದ್ಯಾನಿಲಯ ಅನುದಾನ ಸಮಿತಿ ಆದೇಶ ಹೊರಡಿಸಿದೆ.
ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಗಳು (ಎಚ್ಇಐಎಸ್) ನೀಡುವ ಮುಕ್ತ ಮತ್ತು ದೂರಶಿಕ್ಷಣ ಕಾರ್ಯಕ್ರಮಗಳು ಮತ್ತು ಆನ್ ಲೈನ್ ಕಾರ್ಯಕ್ರಮಗಳಿಗೆ ೨೦೨೦-೨೧ನೇ ಸಾಲಿನ ಸೆಪ್ಟೆಂಬರ್-ಅಕ್ಟೋಬರ್ ಶೈಕ್ಷಣಿಕ ಅಧಿವೇಶನಕ್ಕೆ ಪ್ರವೇಶಾತಿಗೆ ಕೊನೆಯ ದಿನಾಂಕವನ್ನು ಯುಜಿಸಿ ವಿಸ್ತರಣೆ ಮಾಡಿದೆ.
೨೦೨೦-೨೧ನೇ ಸಾಲಿನ ಸೆಪ್ಟೆಂಬರ್-ಅಕ್ಟೋಬರ್ ಶೈಕ್ಷಣಿಕ ಅಧಿವೇಶನಕ್ಕಾಗಿ ಒಡಿಎಲ್ ಮತ್ತು ಆನ್ಲೈನ್ ಮೋಡ್ ನಲ್ಲಿ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕ ವಿಸ್ತರಿಸಿರುವ ಯುಜಿಸಿ, ೨೦೨೦ ರ ಅ. ೩೧ ರಿಂದ ೨೦೨೦ ನವೆಂಬರ್ ೩೦ ರವರೆಗೆ ಪ್ರವೇಶಾತಿಗೆ ಅವಕಾಶ ಕಲ್ಪಿಸಿದೆ.
ಅಲ್ಲದೇ ಉನ್ನತ ಶಿಕ್ಷಣ ಸಂಸ್ಥೆಗಳು ಡಿಸೆಂಬರ್ ೧೫ ರೊಳಗೆ ಪ್ರವೇಶ ವಿವರವನ್ನು ಯುಜಿಸಿ ಡಿಇಬಿ ವೆಬ್ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡಬೇಕು ಎಂದು ಕೇಂದ್ರ ಶಿಕ್ಷಣ ಸಚಿವಾಲಯಯದ ಯುನಿವರ್ಸಿಟಿ ಗ್ರಾ÷್ಯಂಟ್ಸ್ ಕಮಿಷನ್ ಕಾರ್ಯದರ್ಶಿ ಪ್ರೊ.ರಜನೀಶ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಕಾರಣದಿಂದ ಹಲವಾರು ವಿಶ್ವವಿದ್ಯಾನಿಲಯಗಳಲ್ಲಿ ಪದವಿ ಪರೀಕ್ಷೆಗಳ ಫಲಿತಾಂಶ ಇನ್ನು ಪ್ರಕಟವಾಗಿಲ್ಲ. ಆದ್ದರಿಂದ ಈ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಯುಜಿಸಿ ಮುಕ್ತ ವಿವಿಗಳ ಪ್ರವೇಶಾತಿ ದಿನಾಂಕ ವಿಸ್ತರಿಸಿರುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ವಿದ್ಯಾಶಂಕರ್ ತಿಳಿಸಿದ್ದಾರೆ.