ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರೀ ಕುತೂಹಲ ಮೂಡಿಸಿರುವ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2ನ ಚಿತ್ರೀಕರಣ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದ್ದು, ಡಿಸೆಂಬರ್ ಮಧ್ಯದ ವೇಳೆಗೆ ಪೂರ್ಣಗೊಳ್ಳಲಿದೆ.
ಕೊರೊನಾ ಕಾರಣದಿಂದಾಗಿ ಒಂದಷ್ಟು ಕಾಲ ವಿಳಂಬವಾಗಿದ್ದ ಶೂಟಿಂಗ್ ಆ.26ರಿಂದ ಮತ್ತೆ ಆರಂಭವಾಗಿದ್ದು ಅ.8 ರಿಂದ ಯಶ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಚಿತ್ರದ ಉಳಿದ ಭಾಗಗಳನ್ನು ಪೂರ್ಣಗೊಳಿಸಲು ಬಾಲಿವುಡ್ ಭಾಯ್ ಸಂಜಯ್ ದತ್ ಡಿ.6 ರಂದು ಚಿತ್ರ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ.
ವಿಜಯ್ ಕಿರಗಂದೂರ್ ನಿರ್ಮಾಣದ ಬಿಗ್ ಬಜೆಟ್ನ ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಪ್ರಕಾಶ್ ರಾಜ್, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಬಿ ಸುರೇಶ್ ಮತ್ತು ಟಿ.ಎಸ್. ನಾಗಭಾರಣ ಪ್ರಮುಖ ಪಾತ್ರಗಳಾಗಿದ್ದಾರೆ.
ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ನೀಡಿದ್ದು, ಭುವನಗೌಡರು ಛಾಯಾಗ್ರಹಣ ಕೈಗೆತ್ತಿಕೊಂಡಿದ್ದಾರೆ. ಕನ್ನಡದ ಕೆಆರ್ಜಿ ಸ್ಟುಡಿಯೋಸ್, ಹಿಂದಿಯಲ್ಲಿ ಎಕ್ಸೆಲ್ ಎಂಟರ್ಟೈನ್ಮೆಂಟ್ ಮತ್ತು ಎಎ ಫಿಲ್ಮ್ಸ್, ತೆಲುಗಿನ ವರಾಹಿ ಚಲನಾ ಚಿತ್ರಂ ಮತ್ತು ತಮಿಳಿನ ವಿಶಾಲ್ ಫಿಲ್ಮ್ ಫ್ಯಾಕ್ಟರಿ ವಿತರಣೆಯ ಹೊಣೆಹೊತ್ತಿದೆ.
ಅಂದ ಹಾಗೆ ಕೆಜಿಎಫ್ ಭಾಗ ಒಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆ ಸೃಷ್ಟಿಸಿತ್ತು.