ಹೊಸ ದಿಗಂತ ವರದಿ, ಶಿರಸಿ:
ಇಲ್ಲಿನ ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ ( ಕೆಡಿಸಿಸಿ ) ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಕಾರ್ಮಿಕ ಮತ್ತು ಸಕ್ಕರೆ ಸಚಿವ ಶಿವರಾಮ ಹೆಬ್ಬಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಐದು ವರ್ಷದ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ನಗರದ ಮಾರುಕಟ್ಟೆ ಪ್ರಾಂಗಣದಲ್ಲಿರುವ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಶನಿವಾರ ನಡೆಯಿತು. ಉಪಾಧ್ಯಕ್ಷರಾಗಿ ಮೋಹನದಾಸ ನಾಯಕ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಆಯ್ಕೆ ಪ್ರಕ್ರಿಯೆಯಲ್ಲಿ ಸಚಿವ ಶಿವರಾಮ ಹೆಬ್ಬಾರ ಹಾಗೂ ಮೋಹನದಾಸ ನಾಯಕ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಕರ್ತವ್ಯ ನಿರ್ವಹಿಸಿದರು.
ಬ್ಯಾಂಕ್ ನ ೧೬ ನಿರ್ದೇಶಕ ಸ್ಥಾನದಲ್ಲಿ ಈ ಬಾರಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹೆಚ್ಚಿನ ಸ್ಥಾನ ಪಡೆದಿದ್ದು, ಕಳೆದ ಬಾರಿ ಕಾಂಗ್ರೆಸ್ ಹಿಡಿತದಲ್ಲಿದ್ದ ಅಧಿಕಾರವನ್ನು ಬಿಜೆಪಿ ಸದಸ್ಯರು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.