ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ವಿರೋಧ ನೀತಿ ಅನುಸರಿಸಿಕೊಂಡು ಖಲಿಸ್ತಾನಿ ಹೋರಾಟಗಳಿಗೆ ಪರೋಕ್ಷ ಬೆಂಬಲ ವ್ಯಕ್ತಪಡಿಸುತ್ತಿದ್ದ ಕೆನಡಾದ ಜಸ್ಟಿನ್ ಟ್ರುಡೊ ಸರ್ಕಾರ ಇದೀಗ ರಾಜಕೀಯವಾಗಿ ಅನಿರೀಕ್ಷಿತ ಹಿನ್ನಡೆ ಎದುರಿಸುತ್ತಿದೆ.
ಅಲ್ಪಸಂಖ್ಯಾತ ಲಿಬರಲ್ ಸರ್ಕಾರಕ್ಕೆ ಬೆಂಬಲ ನೀಡಿದ್ದ ಭಾರತೀಯ ಮೂಲದ ಜಗ್ಮೀತ್ ಸಿಂಗ್ ಅವರ ನ್ಯೂ ಡೆಮಾಕ್ರಟಿಕ್ ಪಾರ್ಟಿ (ಎನ್‌ಡಿಪಿ) ತನ್ನ ಬೆಂಬಲವನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ.ಇದರಿಂದ ಟ್ರುಡೋ ಸರ್ಕಾರ ಈಗ ಅಲ್ಪ ಮತಕ್ಕೆ ಕುಸಿದಿದೆ.
ಕೆನಡಾದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಚುನಾವಣೆಗಳು ನಡೆಯುತ್ತವೆ. ಜಸ್ಟಿನ್ ಟ್ರುಡೊ ಅವರ ಪಕ್ಷವು ಸತತ ಮೂರು ಬಾರಿ ಗೆದ್ದು ಸರ್ಕಾರವನ್ನು ರಚಿಸಿತ್ತು. ಟ್ರೂಡೊ ಒಂದು ಬಾರಿ ಮಾತ್ರ ಸಂಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಿದ್ದು, ಇನ್ನೆರಡು ಬಾರಿ ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದರು. ಈಗ ಅವರ ಮಿತ್ರ ಜಗ್ಮೀತ್ ಸಿಂಗ್ ಪಕ್ಷ ಶಾಕ್ ನೀಡಿದೆ. ಕಳೆದ ಚುನಾವಣೆಯ ನಂತರ ಟ್ರುಡೊಗೆ ಬೆಂಬಲ ನೀಡಿದ ಪಕ್ಷವು ಒಂದು ವರ್ಷದ ಸಂಬಂಧ ಕಡಿದುಕೊಂಡು ಗುಡ್ಬೈ ಹೇಳಿದೆ.
ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ಕೆನಡಾದಲ್ಲಿ ಚುನಾವಣೆ ನಡೆಯಲಿದ್ದು, ಜಗ್ಮೀತ್ ತಮ್ಮ ಬೆಂಬಲವನ್ನು ಹಿಂತೆಗೆದುಕೊಂಡಿದ್ದರಿಂದ ಟ್ರೂಡೊ ಪಕ್ಷದ ಮೇಲೆ ಇದರ ಪ್ರಭಾವ ಬೀರಲಿದೆ. ಜೊತೆಗೆ ಈಗ ಟ್ರುಡೊ ಸರ್ಕಾರವು ತೂಗುಯ್ಯಾಲೆಯಲ್ಲಿ ಇರುವಂತಾಗಿದೆ.
ಸರ್ಕಾರ ಉಳಿಸಿಕೊಳ್ಳಬೇಕಾದರೆ ಟ್ರುಡೋ ಈಗ ಉಳಿದ ಸಣ್ಣ ಪಕ್ಷಗಳ ಬೆಂಬಲವನ್ನು ಪಡೆಯಬೇಕು. ಬೆಂಬಲ ಸಿಗದೇ ಇದ್ದರೆ ಸರ್ಕಾರ ಪತನವಾಗುವ ಸಾಧ್ಯತೆಯಿದೆ.
ಜಸ್ಟಿನ್ ಟ್ರುಡೊ ಕಾರ್ಪೊರೇಟ್ ಪರ ಇದ್ದು, ಜನರನ್ನು ನಿರಾಸೆಗೊಳಿಸಿದ್ದಾರೆ. ಕೆನಡಿಯನ್ನರಿಂದ ಮತ್ತೊಂದು ಅವಕಾಶ ಪಡೆಯಲು ಅವರು ಅರ್ಹರಲ್ಲ ಎಂದು ಜಗ್ಮೀತ್ ಆರೋಪಿಸಿದ್ದಾರೆ. ಕೆನಡಾದ ಕುಟುಂಬಗಳು ಮತ್ತು ಯುವಕರು ಕಾರ್ಪೊರೇಟ್ ಜನರ ಕೈಗೆ ಬೀಳುವುದನ್ನು ತಡೆಯಲು ದೊಡ್ಡ ಹೋರಾಟ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಸದ್ಯ ಈಗ ಚುನಾವಣೆ ನಡೆದರೆ ಟ್ರುಡೋ ಅವರಿಗೆ ಹೀನಾಯ ಸೋಲಾಗಬಹುದು ಎಂದು ಕೆನಾಡದ ಸಮೀಕ್ಷೆಗಳು ತಿಳಿಸಿವೆ. ಕೆನಡಾ ಸಂಸತ್ತಿನ ಅವಧಿ 2025ಕ್ಕೆ ಅಂತ್ಯವಾಗಲಿದ್ದು 2025ರ ಕೊನೆಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.