ಭೋಪಾಲ್: ಪ್ರಯಾಣಿಕರನ್ನು ರಕ್ಷಣೆ ಮಾಡುವ ರೈಲ್ವೇ ಅಧಿಕಾರಿಗಳೇ ಉತ್ತರ ಪ್ರದೇಶದ ಯುವತಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆಯೊಂದು ಮಧ್ಯ ಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ.
ರೈಲ್ವೆ ಅಧಿಕಾರಿಯಾದ ಆರೋಪಿ 45 ವರ್ಷದ ರಾಜೇಶ್ ತಿವಾರಿಯನ್ನು ಬಂಧಿಸಲಾಗಿದ್ದು, ಭೋಪಾಲ್ ರೈಲ್ವೆ ವಿಭಾಗದ ಸೆಕ್ಯೂರಿಟಿ ಕೌನ್ಸಲರ್ ಹಾಗೂ ವಿಪತ್ತು ನಿರ್ವಹಣಾ ಉಸ್ತುವಾರಿ ಹಾಗೂ ಮತ್ತೊಬ್ಬ ರೈಲ್ವೆ ಅಧಿಕಾರಿಯನ್ನು ಕೂಡ ಬಂಧಿಸಲಾಗಿದೆ ಎಂದು ಭೋಪಾಲ್ ಸೂಪರಿಂಟೆಂಡೆಂಟ್ ಆಫ್ ರೈಲ್ವೆ ಪೊಲೀಸ್(ಎಸ್ಆರ್ ಪಿ) ಹಿತೇಶ್ ಚೌಧರಿ ಮಾಹಿತಿ ನೀಡಿದ್ದಾರೆ.
ಭೋಪಾಲ್ ರೈಲ್ವೆ ನಿಲ್ದಾಣದಲ್ಲಿ ಕೆಲಸ ಮಾಡುತಿದ್ದ ರಾಜೇಶ್ ತಿವಾರಿ ಮತ್ತು ಉತ್ತರ ಪ್ರದೇಶದ ಯುವತಿ ಫೇಸ್ ಬುಕ್ ನಲ್ಲಿ ಸ್ನೇಹಿತರು. ಯುವತಿ ಕೆಲಸ ಹುಡುಕುತ್ತಿರುವುದಾಗಿ ರಾಜೇಶ್ ಗೆ ತಿಳಿಸಿರುತ್ತಾಳೆ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ರಾಜೇಶ್ ಕೆಲಸಕೊಡಿಸುವುದಾಗಿ ಹೇಳಿ ಯುವತಿಗೆ ಭೂಪಾಲ್ ಗೆ ಬರುವಂತೆ ಹೇಳುತ್ತಾನೆ. ಇದನ್ನು ನಂಬಿ ಯುವತಿ ಭೂಪಾಲ್ ಗೆ ಬರುತ್ತಾಳೆ. ಈ ವೇಳೆ ರಾಜೇಶ್ ತಿವಾರಿ ಹಾಗೂ ಆತನ ಗೆಳೆಯ ಇಬ್ಬರು ಸೇರಿ ರೈಲ್ವೆ ನಿಲ್ದಾಣದ ಕೊಟಡಿಗೆ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ ಇಬ್ಬರು ಸೇರಿ ಯುವತಿಗೆ ಕುಡಿಯಲು ತಂಪು ಪಾನೀಯವನ್ನು ನೀಡಿದ್ದು, ಮತ್ತು ಬರುವ ಔಷಧಿಯನ್ನು ಹಾಕಿ ಅತ್ಯಾಚಾರ ಎಸಗಿದ್ದಾರೆ. ಯುವತಿ ಎಚ್ಚರಗೊಂಡ ಬಳಿಕ ಘಟನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಕೂಡಲೇ ಪೊಲೀಸ್ ಅಧಿಕಾರಿಗಳು ರಾಜೇಶ್ ತಿವಾರಿ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.