Tuesday, July 5, 2022

Latest Posts

ಕೆಸಿವ್ಯಾಲಿ ನೀರು ಹರಿದ ಹೊಳಲಿ ಕೆರೆಗೆ ಉಸ್ತುವಾರಿ ಸಚಿವ ನಾಗೇಶ್ ಭೇಟಿ, ಪಂಪ್ ಹೌಸ್ ಪರಿಶೀಲನೆ

ಕೋಲಾರ:  ತಾಲೂಕಿನ ಹೊಳಲಿ ಕೆರೆಯಲ್ಲಿನ ಕೆಸಿವ್ಯಾಲಿ ಪಂಪ್‌ಹೌಸ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲೂಕಿನ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ಹೊಳಲಿ ಕೆರೆಯು ಕೆಸಿವ್ಯಾಲಿ ಯೋಜನೆಯಡಿ ತುಂಬಿದ ಬಳಿಕ ಮುಳಬಾಗಿಲು ತಾಲೂಕಿನ ಕೆರೆಗಳಿಗೆ ನೀರು ಪಂಪ್ ಮಾಡಲಾಗುವ ಹಿನ್ನೆಲೆಯಲ್ಲಿ ಭೇಟಿ ನೀಡಿದ ಸಚಿವರು, ಕೆರೆ ಕಂಡು ಹರ್ಷ ವ್ಯಕ್ತಪಡಿಸಿದರು.
ಈ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು, ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಅವರು, ೧೫ ದಿನಗಳ ಒಳಗಾಗಿ ಗಿಡಗಂಟಿಗಳನ್ನು ತೆರವು ಮಾಡಲು ಸೂಚಿಸಿದರು.
ಹೊಳಲಿ ಕೆರೆಗೆ ಅಮೃತಧಾರೆ ನಾಮಕರಣ
ಭೇಟಿಯ ಬಳಿಕ ಮಾತನಾಡಿದ ಸಚಿವರು, ಹೊಳಲಿಕೆರೆ ಕಂಡು ಬಹಳ ಸಂತೋಷವಾಗಿದ್ದು, ಇದಕ್ಕೆ ಅಮೃತಧಾರೆ ಎಂದು ಹೆಸರಿಡಸಲು ಇಚ್ಛಿಸಿದ್ದೇನೆ. ಅಮೃತಧಾರೆಯೂ ಇಡೀ ಕ್ಷೇತ್ರದಲ್ಲಿ ಹರಿಯಬೇಕು ಎಂದು ಆಶಿಸಿದರು.
ಕೆಸಿವ್ಯಾಲಿ ಯೋಜನೆಯಡಿ ಜಿಲ್ಲೆಯ ೧೨೬ ಕೆರೆಗಳಿಗೂ ನೀರು ಹರಿಯಬೇಕಿದ್ದು, ಜತೆಗೆ ೫೦ ಕೆರೆಗಳ ಹೆಚ್ಚುವರಿ ಪಟ್ಟಿಯನ್ನು ನೀಡಲಾಗಿದೆ ಎಂದರು. ಈ ಮಾರ್ಗದಲ್ಲಿರುವ ಕೆರೆಗಳಿಗೆ ನೀರು ಹರಿದ ಬಳಿಕ ನಮ್ಮ ತಾಲೂಕಿಗೆ ಅಂದರೆ ನವೆಂಬರ್ ತಿಂಗಳಲ್ಲಿ ಹರಿಸಲು ಸಾಧ್ಯವಾಗುತ್ತದೆ. ಈಗಾಗಲೇ ಮಳೆಯಿಂದಾಗಿ ಕೆರೆಗಳು ತುಂಬಿರುವುದರಿಂದ ಕೆಸಿವ್ಯಾಲಿ ಯೋಜನೆಯ ನೀರು ಬೇಗ ಹರಿಯಲು
ಸಾಧ್ಯವಾಗುತ್ತದೆ. ಕೆಸಿವ್ಯಾಲಿ ಹರಿದಿದ್ದೇ ಆದಲ್ಲಿ ಹಚ್ಚಹಸಿರನ್ನು ನಿರಂತರವಾಗಿ ಜಿಲ್ಲೆಯಲ್ಲಿ ನೋಡಬಹುದಾಗಿದೆ ಎಂದರು.
ಪ್ರವಾಸಿತಾಣವಾಗಿ ಹೊಳಲಿ ಅಭಿವೃದ್ಧಿ:
ಈ ಕೆರೆ ತುಂಬಿದ ಬಳಿಕ ಗಜ್ಜಿಗುಂಟೆ ಮತ್ತಿತರರ ಕೆರೆಗಳ ಮೂಲಕ ತಾಲೂಕಿನ ವಿವಿಧ ಕೆರೆಗಳಿಗೂ ಹರಿಯಲಿದೆ. ಮುಳಬಾಗಿಲಿನ ಇಂಡ್ಲು ಕೆರೆಗೆ ಕೊಳಚೆ ನೀರು ಹರಿಯದಂತೆ ಕ್ರಮವಹಿಸಬೇಕಿದ್ದು, ೫೦ ಲಕ್ಷರೂ ವೆಚ್ಚದಲ್ಲಿ ಅಭಿವೃದ್ಧಿ ಮಾಡಿ ಪ್ರವಾಸಿತಾಣವಾಗಿಸೋಣ ಎಂದರು.
ಕೆಸಿವ್ಯಾಲಿ ನಮಗೆ ತಾಯಿಯಿದ್ದಂತೆ. ಆರಂಭದಲ್ಲಿ ಗಲಾಟೆಗಳಾಗಿದ್ದರೂ ಇಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಹರಿಯುತ್ತಾ ಶುದ್ಧ ನೀರು ಆಗಿದೆ. ಕುಡಿಯುವುದಕ್ಕೆ ಅಲ್ಲದಿದ್ದರೂ ಅಂತರ್ಜಲ ಮಟ್ಟ ವೃದ್ಧಿಸಿದೆ. ಸಾಕಷ್ಟು ಅನುಕೂಲವಾಗಲಿದೆ. ಬೋರ್‌ವೆಲ್‌ಗಳಿಗೆ ಕಡಿಮೆ ಅಡಿಗಳಲ್ಲಿ ನೀರು ಸಿಗಬೇಕಾಗಿದೆ ಎಂದರು.
ಸಣ್ಣ ನೀರಾವರಿ ಇಲಾಖೆ, ಅರಣ್ಯ ಇಲಾಖೆಯವರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ನಿಮಗೆ ಬೇಕಿರುವ ಅನುಕೂಲ ನಾನು ಮಾಡಿಕೊಡುತ್ತೇನೆ. ಆದಷ್ಟು ಬೇಗನೆ ಮುಳಬಾಗಿಲು ಸೇರಿದಂತೆ ಎಲ್ಲ ಕೆರೆಗಳಿಗೂ ನೀರು ಹರಿಯುವಂತಾಗಲಿ ಎಂದು ಆಶಿಸಿದರು.
ನರಸಾಪುರ ಕೆರೆಯಂತೆಯೇ  ಹೊಳಲಿಯಲ್ಲಿಯೂ ನಾವೂ ಮುಂದೆ ಕಾಣಬಹುದಾಗಿದೆ. ಒಳ್ಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಒಳ್ಳೆಯವರು ಜತೆಗಿರಬೇಕು. ಅಂತಹವರು ನಮಗೆ ಆತ್ಮೀಯರು ಎಂದರು.
ಜತೆಗೆ ನೀರು ಹರಿಸುವುದಷ್ಟೇ ಅಲ್ಲದೆ ರಸ್ತೆ ಸೇರಿದಂತೆ ಇನ್ನಿತರೆ ಅಭಿವೃದ್ಧಿ ಕೆಲಸಗಳಿಗೂ ಆದ್ಯತೆ ನೀಡಬೇಕಾಗಿದ್ದು, ಎಲ್ಲ ರೀತಿಯಲ್ಲಿಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಳಬಾಗಿಲು ತಾಪಂ ಅಧ್ಯಕ್ಷ ಶ್ರೀನಿವಾಸ್, ಹೊಳಲಿ ಗ್ರಾಮದ ಮುಖಂಡ ಪ್ರಕಾಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss