ಮಂಡ್ಯ : ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಬೀಳುತ್ತಿರುವ ಕಾರಣ ಕೃಷ್ಣರಾಜಸಾಗರ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಜಲಾಶಯದ ಹಿತದೃಷ್ಠಿಯಿಂದ ನದಿಗೆ 30 ಸಾವಿರ ಕ್ಯೂಸೆಕ್ಸ್ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದೆ.
ಕಳೆದ ಕೆಲ ದಿನಗಳಿಂದ ಕೇರಳದ ವೈನಾಡು, ಪಶ್ಚಿಮಘಟ್ಟಗಳು ಹಾಗೂ ಕೊಡಗು ಜಿಲ್ಲೆಯಲ್ಲಿ ವಿಪರೀತ ಮಳೆ ಬೀಳುತ್ತಿದ್ದು, ಕಾವೇರಿ ಜಲಾನಯನ ವ್ಯಾಪ್ತಿಯ ಎಲ್ಲಾ ಜಲಾಶಯಗಳೂ ಬಹುತೇಕ ಭರ್ತಿಯಾಗಿವೆ. ಇದರಿಂದಾಗಿ ಕೃಷ್ಣರಾಜಸಾಗರಕ್ಕೆ 50 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಜಲಾಶಯದಲ್ಲಿ ಪ್ರಸ್ತುತ 116 ಅಡಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಅಣೆಕಟ್ಟೆ ಹಿತದೃಷ್ಠಿಯಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುವುದು. ತಗ್ಗು ಪ್ರದೇಶದಲ್ಲಿರುವವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಈಗಾಗಲೇ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಎಚ್ಚರಿಕೆ ನೀಡಿದ್ದಾರೆ.
ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, 49.452 ಟಿ.ಎಂ.ಸಿ. ನೀರು ಸಂಗ್ರಹ ಸಾಮಥ್ರ್ಯ ಹೊಂದಿದೆ. ಪ್ರಸ್ತುತ ಜಲಾಶಯದಲ್ಲಿ 115.35 ಅಡಿ ನೀರು ಅಂದರೆ 37.455 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 53904 ಕ್ಯೂಸೆಕ್ ನೀರು ಹರಿದುಬರುತ್ತಿದೆ. ರಾತ್ರಿ ವೇಳೆ ಒಳ ಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಒಳಹರಿವಿನ ಪ್ರಮಾಣದ ಆಧಾರದ ಮೇಲೆ ನದಿಗೆ 30 ರಿಂದ 50 ಸಾವಿರ ಕ್ಯೂಸೆಕ್ ಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮುಳುಗಡೆ ಭೀತಿಯಲ್ಲಿ ರಂಗನತಿಟ್ಟು :
ಕೃಷ್ಣರಾಜಸಾಗರ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಹರಿಸುತ್ತಿರುವ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣ ಸಮೀಪವಿರುವ ರಂಗನತಿಟ್ಟು ಪಕ್ಷಿಧಾಮ ಮುಳುಗುವ ಭೀತಿ ಎದುರಾಗಿದೆ. ಸಧ್ಯ ಪಕ್ಷಿಧಾಮದಲ್ಲಿ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ. 1 ಲಕ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ಬಂದಲ್ಲಿ ಮಾತ್ರ ಸಂಪೂರ್ಣ ಪಕ್ಷಿಧಾಮದ ನಡುಗಡ್ಡೆಯೂ ಮುಳುಗಲಿದೆ. ಇದರಿಂದ ಮರಗಳಲ್ಲಿ ಗೂಡು ಕಟ್ಟಿರುವ ಪಕ್ಷಿ ಸಂಕುಲಕ್ಕೆ ಕಂಠಕ ಎದುರಾಗಲಿದೆ.
ಭೋರ್ಗರೆಯುತ್ತಿರುವ ಗಗನಚುಕ್ಕಿ ಜಲಪಾತ :
ಕೃಷ್ಣರಾಜಸಾಗರ ಜಲಾಶಯದಿಂದ ನದಿಗೆ ಹೆಚ್ಚಿನ ನೀರು ಹರಿಸುತ್ತಿರುವುದರ ಜೊತೆಗೆ ಕಬಿನಿ ಜಲಾಶಯ ತುಂಬಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದಾಗಿ ಮಳವಳ್ಳಿ ತಾಲೂಕಿನಲ್ಲಿರುವ ಗಗನಚುಕ್ಕಿ ಜಲಪಾತ ರುದ್ರ ರಮಣೀಯವಾಗಿದೆ.
ನೀರಿನ ಪ್ರಮಾಣ ಹೆಚ್ಚಿರುವ ಹಿನ್ನಲೆಯಲ್ಲಿ ಜಲಪಾತದಲ್ಲಿ ನೀರು ಭೋರ್ಗರೆಯುತ್ತ ನೊರೆ ನೊರೆಯಾಗಿ ಧುಮ್ಮಿಕ್ಕುತ್ತಿದೆ. ಕೋವಿಡ್-19 ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವುದರಿಂದ ಜಲಪಾತದ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ.