Monday, August 8, 2022

Latest Posts

ಕೆ.ಆರ್.ಎಸ್. ಭರ್ತಿಗೆ 5 ಅಡಿ ಬಾಕಿ: ಹೆಚ್ಚಿದ ಒಳ ಹರಿವು

ಮಂಡ್ಯ : ಕೇರಳದ ವೈನಾಡು ಹಾಗೂ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಕಾವೇರಿ ಜಲಾನಯನ ವ್ಯಾಪ್ತಿಯ ಎಲ್ಲಾ ಜಲಾಶಯಗಳು ತುಂಬಿದ್ದು, ಕೃಷ್ಣರಾಜಸಾಗರ ಜಲಾಶಯ ಭರ್ತಿಗೆ ಕೇವಲ 5 ಅಡಿ ಮಾತ್ರ ಬಾಕಿ ಉಳಿದಿದೆ.
ಜಲಾಶಯಕ್ಕೆ 97,165 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಕೇವಲ ಆರೇ ದಿನಗಳಲ್ಲಿ 14 ಅಡಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 97.50 ಅಡಿ ನೀರು ಸಂಗ್ರಹವಾಗಿತ್ತು. ಆಗಸ್ಟ್ ಎರಡನೇ ವಾರದಲ್ಲಿ ಸಂಪೂರ್ಣ ಭರ್ತಿಯಾಗಿತ್ತು. ಈ ಬಾರಿಯೂ ಅದೇ ರೀತಿ ಆಗಸ್ಟ್ ಎರಡನೇ ವಾರದಲ್ಲಿ ಕೆ.ಆರ್.ಎಸ್. ಭರ್ತಿಯಾಗುವ ಸಾಧ್ಯತೆಗಳಿವೆ.
ಅಣೆಕಟ್ಟೆ ಸುರಕ್ಷತೆ ದೃಷ್ಠಿಯಿಂದ 74732 ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಬಂದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ನದಿಗೆ ಹರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, 49.452 ಟಿ.ಎಂ.ಸಿ. ನೀರು ಸಂಗ್ರಹ ಸಾಮಥ್ರ್ಯ ಹೊಂದಿದೆ. ಪ್ರಸ್ತುತ ಜಲಾಶಯದಲ್ಲಿ 119.25 ಅಡಿ ನೀರು ಅಂದರೆ 42.103 ಟಿ.ಎಂ.ಸಿ. ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 97,165 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ, ಅಣೆಕಟ್ಟೆಯಿಂದ 74,732 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ರಂಗನತಿಟ್ಟು ಪಕ್ಷಿಧಾಮದಲ್ಲಿ ದೋಣಿವಿಹಾರ ಸ್ಥಗಿತ :
ಕೃಷ್ಣರಾಜಸಾಗರ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಹರಿಸುತ್ತಿರುವ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣ ಸಮೀಪವಿರುವ ರಂಗನತಿಟ್ಟು ಪಕ್ಷಿಧಾಮ ಮುಳುಗುವ ಭೀತಿ ಎದುರಾಗಿದೆ. ಸಧ್ಯ ಪಕ್ಷಿಧಾಮದಲ್ಲಿ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ. 1 ಲಕ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರು ಬಂದಲ್ಲಿ ಮಾತ್ರ ಸಂಪೂರ್ಣ ಪಕ್ಷಿಧಾಮದ ನಡುಗಡ್ಡೆಯೂ ಮುಳುಗಲಿದೆ. ಇದರಿಂದ ಮರಗಳಲ್ಲಿ ಗೂಡು ಕಟ್ಟಿರುವ ಪಕ್ಷಿ ಸಂಕುಲಕ್ಕೆ ಕಂಠಕ ಎದುರಾಗಲಿದೆ.
ಭೋರ್ಗರೆಯುತ್ತಿರುವ ಗಗನಚುಕ್ಕಿ ಜಲಪಾತ :
ಕೃಷ್ಣರಾಜಸಾಗರ ಜಲಾಶಯದಿಂದ ನದಿಗೆ ಹೆಚ್ಚಿನ ನೀರು ಹರಿಸುತ್ತಿರುವುದರ ಜೊತೆಗೆ ಕಬಿನಿ ಜಲಾಶಯ ತುಂಬಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿರುವುದರಿಂದಾಗಿ ಮಳವಳ್ಳಿ ತಾಲೂಕಿನಲ್ಲಿರುವ ಗಗನಚುಕ್ಕಿ ಜಲಪಾತ ರುದ್ರ ರಮಣೀಯವಾಗಿದೆ.
ಕಬಿನಿ ಜಲಾಶಯ ತುಂಬಿ ಹರಿಯುತ್ತಿರುವ ಕಾರಣ ಕಬಿನಿಯಿಂದಲೂ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ನದಿಗೆ ಬಿಡಲಾಗುತ್ತಿದೆ. ಕೃಷ್ಣರಾಜಸಾಗರ ಜಲಾಶಯದಿಂದಲೂ 74 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಎರಡೂ ನದಿಗಳು ತಿರುಮಕೂಡಲ ಸಂಗಮದಲ್ಲಿ ಒಟ್ಟಿಗೆ ಸೇರಿ ಹರಿಯುತ್ತಿದೆ. ಇದರಿಂದಾಗಿ ಗಗನಚುಕ್ಕಿ ಜಲಪಾತದಲ್ಲಿ ನೀರು ಭೋರ್ಗರೆಯುತ್ತ ನೊರೆ ನೊರೆಯಾಗಿ ಧುಮ್ಮಿಕ್ಕುತ್ತಿದೆ. ಕೋವಿಡ್-19 ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವುದರಿಂದ ಜಲಪಾತದ ದೃಶ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಆದರೂ ಪ್ರವಾಸಿಗರು ಬಂದು ನಿತ್ಯ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಇಂದು ಭಾನುವಾರವಾದ ಕಾರಣ ಪ್ರವಾಸಿಗರ ಸಂಖ್ಯೆ ತುಸು ಹೆಚ್ಚೇ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss