ಹೊಸದಿಗಂತ ವರದಿ, ಮಂಡ್ಯ:
ಕೆ.ಆರ್.ಪೇಟೆಯಲ್ಲಿ 25 ಎಕರೆ ಪ್ರದೇಶದಲ್ಲಿ ಕ್ರೀಡಾ ಸಮುಚ್ಛಯ ಸ್ಥಾಪಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದರು.
ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಎರಡು ದಿನಗಳು ಏರ್ಪಡಿಸಿರುವ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾ.5ರಂದು ನಡೆಯಲಿರುವ ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಜಿಲ್ಲೆಯ ಸುಪುತ್ರ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದು, ಆ ಮೂಲಕ ಒಂದೇ ಸ್ಥಳದಲ್ಲಿ ಎಲ್ಲ ರೀತಿಯ ಕ್ರೀಡೆಗಳನ್ನು ನಡೆಸಲು ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕೆ.ಆರ್.ಪೇಟೆಯಲ್ಲಿ ಉತ್ತಮ ಕ್ರೀಡಾಂಗಣ ಇಲ್ಲದ್ದರಿಂದಾಗಿ ಪ್ರತಿನಿತ್ಯ 200 ರಿಂದ 250 ಮಂದಿ ತಮ್ಮ ಮಕ್ಕಳನ್ನು ಮೈಸೂರಿಗೆ ಕರೆದುಕೊಂಡು ಕ್ರೀಡಾಭ್ಯಾಸ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲು ಕೆ.ಆರ್.ಪೇಟೆಯಲ್ಲಿ ಸುಸಜ್ಜಿತ ಕ್ರೀಡಾ ಸಮುಚ್ಛಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.