ದುಬೈ: ಐಪಿಎಲ್ ಟೂರ್ನಿಯ 6ನೇ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರ ಸ್ಫೋಟಕ ಶತಕದ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಎದುರಾಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 207ರನ್ಗಳ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಪಂಜಾಬ್, ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 206 ರನ್ ಕಲೆಹಾಕಿತು.
ಆರಂಭಿಕರಾಗಿ ಕಣಕ್ಕಿಳಿದ ಕನ್ನಡಿಗರಾದ ನಾಯಕ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ 57 ರನ್ಗಳ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ವೇಳೆ 26 ರನ್ ಗಳಿಸಿದ್ದ ಮಯಾಂಕ್ ಔಟ್ ಆದರು . ನಿಕೋಲಸ್ ಪೂರನ್ (17) ಔಟಾದರು. ಬಳಿಕ ಬಂದ ಗ್ಲೇನ್ ಮ್ಯಾಕ್ಸ್ವೆಲ್ ಕೇವಲ 5 ರನ್ಗೆ ವಿಕೆಟ್ ಒಪ್ಪಿಸುವ ಮೂಲಕ ಮತ್ತೆ ನಿರಾಶೆ ಮೂಡಿಸಿದರು.
ಇತ್ತ ಕೊನೆಯವರೆಗೂ ಅಬ್ಬರಿಸಿದ ರಾಹುಲ್ ಕೇವಲ 69 ಎಸೆತಗಳಲ್ಲಿ 7 ಸಿಕ್ಸರ್, 14 ಬೌಂಡರಿ ನೆರವಿನಿಂದ ಅಜೇಯ 132 ರನ್ ಗಳಿಸಿ ನಾಯಕನ ಜವಬ್ದಾರಿಯುತ ಆಟವಾಡಿದರು. ಉಳಿದಂತೆ ಕರುಣ್ ನಾಯರ್ 15 ರನ್ ಗಳಿಸಿ ಅಜೇಯರಾಗಿ ಉಳಿದರು.
ಆರ್ಸಿಬಿ ಪರ ಶಿವಂ ದುಬೆ ಎರಡು ವಿಕೆಟ್ ಪಡೆದರೆ, ಯಜುವೇಂದ್ರ ಚಹಾಲ್ 1 ವಿಕೆಟ್ಗೆ ತೃಪ್ತಿಪಟ್ಟರು.