Thursday, August 11, 2022

Latest Posts

ಕೆ.ಚಂದ್ರಾರೆಡ್ಡಿ, ಡಿ.ವಿ.ಹರೀಶ್‌ರ  ನೇತೃತ್ವದಲ್ಲಿ ಡಿಕೆಶಿಗೆ ಬೆಳ್ಳಿ ಗದೆ, ಖಡ್ಗ ನೀಡಿ ಸ್ವಾಗತ

ಹೊಸ ದಿಗಂತ ವರದಿ, ಕೋಲಾರ:

ಮುಂಬರುವ ವಿಧಾನಸಭಾ ಚುನಾವಣಾ ಪೂರ್ವ ಸಿದ್ಧತೆ ಕಾರ್ಯಆರಂಭಿಸಲು ಕೋಲಾರ ಜಿಲ್ಲೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು ಮುಖಂಡರು ಕಾರ್ಯಕರ್ತರು ಬೆಳ್ಳಿಗದೆ ಮತ್ತು  ಬೆಳ್ಳಿ ಖಡ್ಗ ನೀಡಿ ಸ್ವಾಗತಿಸಿದರು.
ಬೆಂಗಳೂರಿನಿಂದ ಕೋಲಾರ ಜಿಲ್ಲೆಯನ್ನು ಪ್ರವೇಶಿಸುವ ರಾಮಸಂದ್ರ ಗಡಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ನೇತೃತ್ವದಲ್ಲಿ ಮುಖಂಡರು ಮತ್ತು ವಿವಿಧ ಘಟಕಗಳ ಜಿಲ್ಲಾಧ್ಯಕ್ಷರು ನಿಂತು ೩೫ ಅಡಿ  ಉದ್ಧದ ಪುಷ್ಪಮಾಲೆ ಹಾಕಿ, ಬೆಳ್ಳಿ ಗದೆಯನ್ನು ನೀಡುವ ಮೂಲಕ ಡಿ.ಕೆ.ಶಿವಕುಮಾರ್ ಹಾಗೂ ರಾಮಲಿಂಗಾರೆಡ್ಡಿಯನ್ನು ಸ್ವಾಗತಿಸಿದರು. ಇವರೊಂದಿಗೆ ಮಾಜಿ ಕೇಂದ್ರ ಮಂತ್ರಿ ಕೆ.ಎಚ್.ಮುನಿಯಪ್ಪ ಸಾಥ್ ನೀಡಿ ಬೆಂಗಳೂರಿನಿಂದ ಆಗಮಿಸಿದ್ದರು.
ಅಲ್ಲಿಂದ ನೇರವಾಗಿ ಕೋಲಾರ ನಗರವನ್ನು ಬೈಪಾಸ್ ಮೂಲಕ ಹಾದು ಹೋದ ಡಿ.ಕೆ.ಶಿವಕುಮಾರ್ ಸಾರಥ್ಯದ ಕಾರುಗಳನ್ನು ಮೆರವಣಿಗೆಯನ್ನು ಯುವ ಕಾಂಗ್ರೆಸ್ ಮುಖಂಡ ಫ್ರಾನ್ಸಿಸ್ ಮತ್ತು ಪದಾಽಕಾರಿಗಳು ಪವನ್ ಕಾಲೇಜು ಬಳಿ ತಡೆದು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
ನಂತರ ಕುರುಡು ಮಲೆಗೆ ತೆರಳುವ ಮಾರ್ಗ ಮಧ್ಯೆ ವಡಗೂರು ಗೇಟ್ ಬಳಿ ಕೋಚಿಮುಲ್ ನಿರ್ದೇಶಕ ಹಾಗೂ ಕಾಂಗ್ರೆಸ್ ಮುಖಂಡ ವಡಗೂರು ಹರೀಶ್ ನೇತೃತ್ವದ ಕಾರ್ಯಕರ್ತರು ಮೆರವಣಿಗೆಯನ್ನು ತಡೆದು ಡಿ.ಕೆ.ಶಿವಕುಮಾರ್ ಮತ್ತು ತಂಡವನ್ನು ಜಿಲ್ಲೆಗೆ ಸ್ವಾಗತಿಸಿದರು.
ಬೆಳ್ಳಿ ಖಡ್ಗ ನೀಡಿದ ಡಿ.ವಿ.ಹರೀಶ್
ಇದೇ ಸಂದರ್ಭದಲ್ಲಿ ವಡಗೂರು ಹರೀಶ್ ಡಿ.ಕೆ.ಶಿವಕುಮಾರ್‌ರಿಗೆ ಬೆಳ್ಳಿ ಖಡ್ಗವನ್ನು ನೀಡಿ ಆತ್ಮೀಯವಾಗಿ ಸ್ವಾಗತ ಕೋರಿದರು. ಈ  ಸಂದರ್ಭದಲ್ಲಿ ಕಾರ್ಯಕರ್ತರು ಜೈಕಾರ ಮೊಳಗಿಸಿದರು.
ನಂತರ ನೇರವಾಗಿ ಮುಳಬಾಗಿಲು ತಾಲೂಕು ಕುರುಡುಮಲೆಗೆ  ಪೂಜೆ ಸಲ್ಲಿಸಿ ಮುಂದಿನ ವಿಧಾನಸಭಾ ಚುನಾವಣೆ ಸಿದ್ಧತೆಗೆ ಶುಭವಾಗುವಂತೆ ಪ್ರಾರ್ಥಿಸಿದರು.
ಪೂಜೆ ನಂತರ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ, ಮುಳಬಾಗಿಲಿನಲ್ಲಿ ಮುಖಂಡರೊಬ್ಬರ ಮನೆಯಲ್ಲಿ ಊಟ ಸೇವಿಸಿ ಕೋಲಾರಕ್ಕೆ ಆಗಮಿಸಿದರು.
ಕೋಲಾರದಲ್ಲಿ ಮಾಜಿ ಸಚಿವ ಕೆ.ಎಚ್.ಮುನಿಯಪ್ಪರ ನಿವಾಸಕ್ಕೆ ಭೇಟಿ ನೀಡಿ ಅಲ್ಲಿ ಸ್ಥಳೀಯವಾಗಿ ಮುಖಂಡರೊಂದಿಗೆ ಚರ್ಚಿಸಿ ಚಹಾ ಸೇವಿಸಿದರು. ನಂತರ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ, ಶಾಸಕ, ಮಾಜಿ ಶಾಸಕರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss