ರಾಮನಗರ: ಪ್ರಸ್ತಾಪಿತ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ 9000 ಕೋಟಿ ರೂ.ಗಳ ವೆಚ್ಚದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಅನುಮೋದನೆ ಪಡೆದುಕೊಂಡ ಬಳಿಕ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತಿಳಿಸಿದರು.
ಯೋಜನೆಗೆ ಸಂಬಂಧಿಸಿದಂತೆ ಅರ್ಕಾವತಿ ಮತ್ತು ಕಾವೇರಿ ಸೇರುವ ಸಂಗಮ ಹಾಗೂ ಜಲಾಶಯ ನಿರ್ಮಿಸಲಾಗುವ ಉದ್ದೇಶಿತ ಒಂಟಿಗುಂಡ್ಲು ಪ್ರದೇಶಕ್ಕೆ ಇಂದು ಭೇಟಿ ನೀಡಿ, ಸ್ಥಳ ಪರಿಶೀಲಿಸಿದ ಬಳಿಕ ಮಾತನಾಡಿದ ಸಚಿವರು, ಅಣೆಕಟ್ಟು ನಿರ್ಮಾಣವಾಗುವುದರಿಂದ ಸುಮಾರು 5051 ಹೆಕ್ಟೇರ್ ಅರಣ್ಯ ಭೂಮಿ ಮುಳುಗಡೆಯಾಗಲಿದೆ. ಹೀಗಾಗಿ, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮೋದನೆ ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂದರು.
ಪ್ರಸ್ತಾಪಿತ ಯೋಜನೆಗಾಗಿ ಒಟ್ಟಾರೆಯಾಗಿ 5252 ಹೆಕ್ಟೇರ್ ಪ್ರದೇಶದ ಅವಶ್ಯಕತೆ ಇದೆ. ಇದರಲ್ಲಿ 3181 ಹೆ. (ಶೇ. 63ರಷ್ಟು) ವನ್ಯಜೀವಿ ಪ್ರದೇಶವಾಗಿದೆ. 1870 ಹೆ. (ಶೇ. 37) ಮೀಸಲು ಅರಣ್ಯ ಪ್ರದೇಶವಾಗಿದ್ದರೆ 201 ಹೆಕ್ಟೇರ್ ಕಂದಾಯ ಪ್ರದೇಶವಾಗಿರುತ್ತದೆ. ಈ ಪೈಕಿ ಶೇ. 63ರಷ್ಟು ಪ್ರದೇಶ ವನ್ಯಜೀವಿ ಪ್ರದೇಶವಾಗಿರುವುದರಿಂದ ಕೇಂದ್ರದ ಪರಿಸರ ಸಚಿವಾಲಯದಿಂದ ಅನುಮತಿ ಪಡೆದುಕೊಳ್ಳವುದು ಅಗತ್ಯವಾಗಿದೆ ಎಂದು ವಿವರಿಸಿದರು.
ಪ್ರಸ್ತಾಪಿತ ಜಲಾಶಯಕ್ಕಾಗಿ ಈಗಾಗಲೇ ಪರಿಷ್ಕೃತ ವಿಸ್ತ್ರತ ಯೋಜನಾ ವರದಿಯನ್ನು (ಡಿಟೈಲ್ಡ್ ಪ್ರಾಜೆಕ್ಟ್ ರಿಪೋರ್ಟ್ – ಡಿಪಿಆರ್) ಸಿದ್ದಪಡಿ 2019ರ ಜನವರಿ ತಿಂಗಳಲ್ಲಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಇದಕ್ಕೆ ಕೇಂದ್ರದ ಜಲ ಆಯೋಗದ ವಿವಿಧ ನಿರ್ದೇಶನಾಲಯಗಳಲ್ಲಿ ಪರಿಶೀಲನೆಯಲ್ಲಿದೆ. ಇವುಗಳಿಂದ ಅನುಮೋದನೆ ದೊರೆತ ತಕ್ಷಣವೆ ಡಿಪಿಆರ್ ಅನ್ನು ಸಚಿವ ಸಂಪುಟದ ಮುಂದಿರಿಸಿ, ಅನುಮೋದನೆ ಪಡೆದುಕೊಂಡ ಬಳಿಕ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಜಾರಕಿಹೊಳಿ ಅವರು ತಿಳಿಸಿದರು.
ದೆಹಲಿ ಭೇಟಿ
ಅಣೆಕಟ್ಟು ನಿರ್ಮಾಣಕ್ಕಾಗಿ ಈಗಾಗಲೆ 2019ರ ನವೆಂಬರ್ ಮತ್ತು ಕಳೆದ ಜುಲೈ 14ರಂದು ಕೇಂದ್ರದ ಜಲಶಕ್ತಿ ಸಚಿವರನ್ನು ಖುದ್ದು ಭೇಟಿ ಮಾಡಿ ಚರ್ಚಿಸಲಾಗಿದೆ. ಹಾಗೆಯೇ, ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದನ್ನು ಸ್ಮರಿಸಿದ ಸಚಿವರು, ಮುಂದಿನ ಬುಧವಾರ ಇಲ್ಲವೆ ಗುರುವಾರ (ಸೆ. 16/ 17) ಮತ್ತೊಮ್ಮೆ ಪರಿಸರ ಸಚಿವರನ್ನು ಭೇಟಿ ಮಾಡಿ ಯೋಜನೆಯ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟು ಅನುಮೋದನೆ ಪಡೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಮುಖ್ಯ ಇಂಜಿನಿಯರ್ ಶಂಕ್ರರೇಗೌಡ, ಸೂಪರಿಂಟೆಂಡ್ ಇಂಜಿನಿಯರ್ ವಿಜಯ್ ಕುಮಾರ್, ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ವಂಕಟೇಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು.