ಮಂಗಳೂರು
ತುಳುನಾಡಿನ ಜಾನಪದ ಕ್ರೀಡೆ ಕಂಬಳ ಆಯೋಜನೆ ಸಂಬಂಧಿಸಿ ಕೇಂದ್ರ ಸರಕಾರದ ಮುಂದಿನ ಮಾರ್ಗಸೂಚಿ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ, ಕಾಸರಗೊಡು ಜಿಲ್ಲಾ ಕಂಬಳ ಸಮಿತಿ ಶುಕ್ರವಾರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್ ಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ವೇಳೆ ಈ ಮಾಹಿತಿ ನೀಡಿದ್ದಾರೆ.
ಧಾರ್ಮಿಕ ನಂಬಿಕೆ ಮತ್ತು ಕೃಷಿ ಸಂಸ್ಕೃತಿಯನ್ನೊಳಗೊಂಡ ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಡೆಸಲು ಜಿಲ್ಲಾಡಳಿತ ಉತ್ಸುಕವಾಗಿದೆ ಮತ್ತು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೋಟ ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ದೇಶಾದ್ಯಂತ ಈಗಾಗಲೇ ಬಹುತೇಕ ಅನ್ಲಾಕ್ ಆಗಿದ್ದು, ವ್ಯಾಪಾರ-ವಹಿವಾಟು ಯಥಾಸ್ಥಿತಿಗೆ ಮರಳುತ್ತಿವೆ. ಸದ್ಯದ ಪರಿಸ್ಥಿತಿ ಅವಲೋಕಿಸಿ ಕೇಂದ್ರದಿಂದ ಮತ್ತೊಂದು ಗೈಡ್ಲೈನ್ಸ್ ಬರಲಿದ್ದು, ಆ ಮಾರ್ಗಸೂಚಿ ಬಂದ ಬಳಿಕ ಕಂಬಳವನ್ನು ಯಾವ ರೀತಿ ಆಯೋಜನೆ ಮಾಡಬಹುದು ಎಂಬುವುದನ್ನು ನಿರ್ಧರಿಸಲಾಗುವುದು ಎಂದರು.
ಅನಾದಿ ಕಾಲದಿಂದ ದೈವ-ದೇವರ ಚಾರಿತ್ರಿಕ ಹಿನ್ನೆಲೆ, ಸಾಂಸ್ಕೃತಿಕ ಪರಂಪರೆ, ಸಾಮರಸ್ಯದ ಸಂಕೇತವಾಗಿರುವ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಂಬಳ ಸಮಿತಿ ಶ್ರಮಿಸುತ್ತಿದೆ. ಈ ಬಾರಿ ಕೊರೋನಾ ಹಿನ್ನಲೆಯಲ್ಲಿ ಆಚರಣೆಗೆ ಅಡ್ಡಿಯಾಗಿದ್ದು, ಸರಕಾರದ ಷರತ್ತು ಪಾಲಿಸಿಕೊಂಡು ಸೀಮಿತ ಕಂಬಳ ಆಚರಣೆಗೆ ಅವಕಾಶ ನೀಡಬೇಕೆಂದು ಕಂಬಳ ಸಮಿತಿ ಆಗ್ರಹಿಸಿದೆ.
ಈ ಸಂದರ್ಭ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಉಪಾಧ್ಯಕ್ಷ ನವೀನ್ಚಂದ್ರ ಆಳ್ವ ತಿರುವೈಲುಗುತ್ತು, ಗೌರವಾಧ್ಯಕ್ಷ ಬಾರ್ಕೂರು ಶಾಂತರಾಮ ಶೆಟ್ಟಿ, ಮಾಜಿ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಬ್ರಿಜೇಶ್ ಚೌಟ, ಪ್ರಧಾನ ಕಾರ್ಯದರ್ಶಿ ಸುಜಿತ್, ಕಂಬಳ ಕೋಣಗಳ ಯಜಮಾನ ಮುಚ್ಚೂರು ಕಲ್ಕುಡ ಲೋಕೇಶ್ ಶೆಟ್ಟಿ, ತಿರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್ ಉಪಸ್ಥಿತರಿದ್ದರು.