ಮಂಗಳೂರು: ಕೇಂದ್ರ ಸರ್ಕಾರ ನೂತನವಾಗಿ ಜಾರಿಗೊಳಿಸಲಿರುವ ಶಿಕ್ಷಣ ನೀತಿ ದೇಶದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲಿದೆ. ವಿದ್ಯಾರ್ಥಿಗಳನ್ನು ಉದ್ಯೋಗ ಮಾರುಕಟ್ಟೆಗೆ ಪೂರಕವಾಗಿ ಸಜ್ಜುಗೊಳಿಸುವ ಜತೆಗೆ ಸ್ಟಾರ್ಟ್ ಅಪ್ ನಂತಹ ಯೋಜನೆಗಳಿಂದ ಪದವೀಧರರು ಉದ್ಯೋಗ ಪಡೆಯುವ ಬದಲಿಗೆ ಉದ್ಯೋಗ ನೀಡಿಕೆಗೆ ಗಮನ ನೀಡುವಂತೆ ಮಾಡಲಾಗಿದೆ.
ಭಾರತ ವಿಶ್ವಗುರು ಆಗುವಲ್ಲಿ ಕೇಂದ್ರದ ಹೊಸ ಶಿಕ್ಷಣ ನೀತಿ ಮಹತ್ವದ ಹೆಜ್ಜೆಯಾಗಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದರು. ಸುರತ್ಕಲ್ ಎನ್ಐಟಿಕೆಯಲ್ಲಿ ಮಂಗಳವಾರ ಸೆಂಟ್ರಲ್ ರಿಸರ್ಚ್ ಫೆಸಿಲಿಟಿ ಕಟ್ಟಡ ಉದ್ಘಾಟನೆ ಮತ್ತು ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ಜ್ಞಾನ, ವಿಜ್ಞಾನ, ಅನುಸಂಧಾನದಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದ ಭಾರತ ಒಂದು ಕಾಲದಲ್ಲಿ ವಿಶ್ವಗುರು ಆಗಿತ್ತು. ಬಳಿಕ ಆಕ್ರಮಣಕ್ಕೆ ಒಳಗಾಗಿ ವೈಭವ ಕಳೆದುಕೊಂಡಿತ್ತು. ಇದೀಗ ಮತ್ತೆ ಭಾರತ ವಿಶ್ವದಲ್ಲಿ ಎದ್ದು ನಿಲ್ಲುತ್ತಿದ್ದು, ಹೊಸ ಶಿಕ್ಷಣ ನೀತಿ ಮೂಲಕ ಭಾರತದ ಗತ ವೈಭವ ಮತ್ತೆ ಮರುಕಳಿಸಲಿದೆ. ಕೇಂದ್ರ ಸರಕಾರ ಸಂಶೋಧನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು, ನೂತನ ಶಿಕ್ಷಣ ನೀತಿಯೂ ಜಾರಿಯಾಗುತ್ತಿದೆ ಎಂದರು.
ರಾಷ್ಟ್ರೀಯ ಸಂಶೋಧನಾ ಫೌಂಡೇಶನ್ (ಎನ್ಆರ್ಎಫ್) ಗಾಗಿ ಸರಿಸುಮಾರು 50 ಸಾವಿರ ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು, ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಇದು ವರವಾಗಲಿದೆ. ಐದು ವರ್ಷಗಳ ಕಾಲ ಸಂಶೋಧನಾ ರಂಗದಲ್ಲಿ ಕೆಲಸ ಮಾಡಿದವರಿಗೆ ಧನಸಹಾಯ ನೀಡಲಾಗುತ್ತಿದೆ. ಈ ಮೂಲಕ ಸಂಶೋಧನೆಗಾಗಿ ಸರ್ಕಾರ ವಿಶಿಷ್ಟವಾದ ನೆರವು ನೀಡುತ್ತಿದೆ. ಇದರ ಜತೆಯಲ್ಲಿ ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಗಳಿಗೂ ಬೆಂಬಲ ನೀಡುತ್ತಿದೆ ಎಂದರು.
ಸೂಕ್ತ ದೂರದೃಷ್ಟಿ ಇಲ್ಲದಿದ್ದರೆ ಇನ್ನೊಬ್ಬರಿಗೆ ದಾರಿ ತೋರಿಸಲು ಸಾಧ್ಯವಾಗದು. ಕೇವಲ ಆಲೋಚನೆ ಇದ್ದರೆ ಸಾಲದು, ಆ ನಿಟ್ಟಿನಲ್ಲಿ ಕಾರ್ಯಯೋಜನೆ ಹಾಕುವುದು ಮುಖ್ಯ. ಪ್ರಾಚೀನ ಭಾರತದಲ್ಲಿ ಎಲ್ಲವೂ ಇತ್ತು. ಚರಕನ ಚಿಕಿತ್ಸಾ ಪದ್ಧತಿ, ಆಯುರ್ವೇದ, ಪಾಣಿನಿಯ ಭಾಷಾ ಪರಿಣತಿ ನಮ್ಮ ಶ್ರೇಷ್ಠತೆ. ಈ ಎಲ್ಲಾ ಪರಂಪರೆಗಳನ್ನು ಹೊಂದಿರುವ ದೇಶಕ್ಕೆ ವಿಶ್ವಗುರು ಆಗುವ ಎಲ್ಲ ಸಾಮರ್ಥ್ಯವಿದೆ ಎಂದರು.
ಕೇವಲ ಪುಸ್ತಕದ ವಿಷಯ ಕಲಿತರೆ ಸಾಲದು. ಉದ್ಯೋಗವನ್ನು ನಂಬಿ ಪದವಿ ಪಡೆಯಬೇಡಿ. ಇನ್ನೊಬ್ಬರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಯುವ ಜನಾಂಗ ಬೆಳೆಯಬೇಕು. ಸ್ವಚ್ಛ ಭಾರತಕ್ಕೆ ಕೇಂದ್ರ ಸರ್ಕಾರ ಮಹತ್ವ ನೀಡಿದ್ದು, ಪ್ರತಿ ವಿದ್ಯಾರ್ಥಿ ತನ್ನ ಹುಟ್ಟು ಹಬ್ಬದ ದಿನ ಗಿಡ ನೆಟ್ಟು ಪೋಷಿಸಬೇಕು ಎಂದರು. ಎನ್ಐಟಿಕೆ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ.ಬಲವೀರ ರೆಡ್ಡಿ ಮಾತನಾಡಿ, ಎನ್ಐಟಿಕೆಯಲ್ಲಿ ಕಲಿತ ಶೇ.95ರಷ್ಟು ವಿದ್ಯಾರ್ಥಿಗಳು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಉದ್ಯೋಗ ಪಡೆಯುತ್ತಿದ್ದಾರೆ. ಉಳಿದ ಶೇ.5ರಷ್ಟು ಮಂದಿ ಮಾತ್ರ ಉನ್ನತ ಶಿಕ್ಷಣಕ್ಕೆ ತೆರಳುತ್ತಿದ್ದಾರೆ ಎಂದರು.
ಎನ್ಐಟಿಕೆ ನಿರ್ದೇಶಕ ಉಮಾಮಹೇಶ್ವರ ರಾವ್ ಮಾತನಾಡಿ, ಸುರತ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ಗೇಟ್ನ್ನು ಸ್ಥಳಾಂತರಗೊಳಿಸಬೇಕು ಎಂದು ಕೇಂದ್ರ ಸಚಿವ ರಮೇಶ್ ಪೋಖ್ರಿಯಾಲ್ ಅವರಿಗೆ ಮನವಿ ಮಾಡಿದರು. ಟೋಲ್ಗೇಟ್ ಇರುವುದರಿಂದ ವಿದ್ಯಾರ್ಥಿಗಳು, ಅದರಲ್ಲೂ ವಿದ್ಯಾರ್ಥಿನಿಯರ ಭದ್ರತೆಗೆ ತೊಡಕಾಗುತ್ತಿದೆ. ಹಾಗಾಗಿ ಸ್ಥಳಾಂತರ ಮಾಡಬೇಕು ಎಂದು ಹೇಳಿದರು. ಎನ್ಐಟಿಕೆಗೆ ಮಂಜೂರಾಗಿರುವ ಕೇಂದ್ರೀಯ ವಿದ್ಯಾಲಯವನ್ನು ಶೀಘ್ರ ಆರಂಭಿಸಬೇಕು ಎಂದು ಮನವಿ ಮಾಡಿದರು. |
ಬೇರೆ ವಿದ್ಯಾರ್ಥಿಗಳಿಗೂ ಲಭ್ಯ: ಎನ್ಐಟಿಕೆಯಲ್ಲಿ ಪ್ರತಿವರ್ಷ 150 ಸಂಶೋಧನಾ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿzರೆ. ಪ್ರಸ್ತುತ 700ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳು ಇದ್ದಾರೆ. ಸಂಶೋಧನೆಯಲ್ಲಿ ಅತ್ಯಾಧುನಿಕ ಉಪಕರಣಗಳ ಬಳಕೆಯಿಂದ ಸಂಶೋಧನಾ ಫಲಿತಾಂಶಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಕಾಯ್ದುಕೊಳ್ಳಲು, ಜಗತ್ತಿನ ವಿವಿಧೆಡೆಯ ಸಂಶೋಧನೆಗಳೊಂದಿಗೆ ಫೈಪೋಟಿ ನಡೆಸಲು ಸಾಧ್ಯವಾಗಲಿದೆ ಎಂದು ಸಿಆರ್ಎಫ್ ಮುಖ್ಯಸ್ಥ ಉದಯ್ ಭಟ್ ತಿಳಿಸಿದರು. ಈ ಘಟಕದ ಉಪಕರಣಗಳು ಕೇವಲ ಎನ್ಐಟಿಕೆಗೆ ಮಾತ್ರ ಸೀಮಿತವಾಗಿಲ್ಲ. ಬೇರೆ ಕಾಲೇಜುಗಳ ತಾಂತ್ರಿಕ, ವಿಜ್ಞಾನ ಸಂಶೋಧನಾ ವಿದ್ಯಾರ್ಥಿಗಳು ಕೂಡ ಇದರ ಸದುಪಯೋಗ ಪಡೆದುಕೊಳ್ಳಬಹುದು. ಇದಕ್ಕಾಗಿ ಅಲ್ಪ ಶುಲ್ಕ ಪಾವತಿಸಬೇಕಾಗುತ್ತದೆ ಎಂದರು. |
ಸಂಶೋಧನಾ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳು: ಸುರತ್ಕಲ್ ಎನ್ಐಟಿಕೆಯಲ್ಲಿ ಆರಂಭಗೊಂಡಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಸಂಶೋಧನಾ ಫಲಿತಾಂಶಗಳನ್ನು ನೀಡುವ ಅತ್ಯಾಧುನಿಕ ಉಪಕರಣಗಳುಳ್ಳ ಕೇಂದ್ರೀಯ ಸಂಶೋಧನಾ ಘಟಕವನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಉದ್ಘಾಟಿಸಿದರು. ಈ ಘಟಕ ಪ್ರಸ್ತುತ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದ್ದು, 48 ಕೋಟಿ ರೂ. ವೆಚ್ಚದ ಹೊಸ ಕಟ್ಟಡ ನಿರ್ಮಾಣಕ್ಕೆ ಈ ಸಂದರ್ಭ ಶಿಲಾನ್ಯಾಸ ನಡೆಸಲಾಯಿತು. ಎನ್ಐಟಿಕೆ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಡ, ಉದ್ಯೋಗಿಗಳ ಅಪಾರ್ಟ್ಮೆಂಟ್ ಕಟ್ಟಡದ ಶಂಕುಸ್ಥಾಪನೆಯನ್ನು ಈ ಸಂದರ್ಭ ಸಚಿವರು ನೆರವೇರಿಸಿದರು. ಕೇಂದ್ರೀಯ ಸಂಶೋಧನಾ ಘಟಕದಲ್ಲಿ ಪ್ರಸ್ತುತ ಮೂರು ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ. ಇನ್ನೂ 45 ಉಪಕರಣಗಳನ್ನು ದೇಶ – ವಿದೇಶಗಳಿಂದ ತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಮೂರು ನಾಲ್ಕು ತಿಂಗಳೊಳಗೆ ಎಲ್ಲ ಉಪಕರಣಗಳನ್ನು ಅಳವಡಿಸಲಾಗುವುದು. ಇದೆಲ್ಲವೂ ಕಾರ್ಯಗತವಾದರೆ ಸುಮಾರು 80 ಕೋಟಿ ರುಪಾಯಿ ಮೌಲ್ಯದ ಉಪಕರಣಗಳು ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನೆ ನಡೆಸಲು ಲಭ್ಯವಾಗಲಿವೆ. ಬಹುತೇಕ ಎಲ್ಲ ವಿಭಾಗಗಳ ಸಂಶೋಧನಾರ್ಥಿಗಳಿಗೂ ಈ ಉಪಕರಣಗಳು ಅನುಕೂಲವಾಗಲಿವೆ. |