ಬಾಗಲಕೋಟೆ: ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರು ಹಾಗೂ ಬೆಳಗಾವಿಯ ಸಂಸದರಾದ ಸುರೇಶ ಅಂಗಡಿಯವರ ನಿಧನ ದುಃಖ ತಂದಿದೆ ಎಂದು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ತಿಳಿಸಿದ್ದಾರೆ.
ನಾಲ್ಕು ಬಾರಿ ಸಂಸದರಾಗಿರುವ ಸುರೇಶ ಅಂಗಡಿಯವರು ಉತ್ತಮ ಸಂಸದ ಪಟು ಆಗಿದ್ದರು ಎಲ್ಲರೊಂದಿಗೆ ಬೆರೆಯುವ ಮೂಲಕ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಪಕ್ಷದ ಸಂಘಟೆಯಲ್ಲಿಯೂ ಸಹ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದ್ದರು ಒಬ್ಬ ಉತ್ತಮ ಸ್ನೇಹಿತನನ್ನು ಕಳೆದುಕೊಂಡಿದ್ದು, ಅಂಗಡಿಯವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಚರಂತಿಮಠ ಸಂತಾಪ: ಬೆಳಗಾವಿ ಸಂಸದರು ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ ಅಂಗಡಿಯವರ ನಿಧನ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನದಿಂದ ಅವರ ಕುಟುಂಬದವರಿಗೆ ದುಃಖ ಸಹಿಸಿಕೊಳ್ಳುವಂತ ಶಕ್ತಿಯನ್ನು ದೇವರು ನೀಡುವಂತಾಗಲಿ ಎಂದು ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ತಿಳಿಸಿದ್ದಾರೆ.
ರೈಲ್ವೆ ಖಾತೆ ಸಚಿವರಾದ ಬಳಿಕ ಬಾಗಲಕೋಟೆ ರೈಲ್ವೆ ನಿಲ್ಧಾಣಕ್ಕೆ ಭೇಟಿ ನೀಡಿದಾಗ ಸಮಗ್ರ ಮಾಹಿತಿಯನ್ನು ನಮ್ಮಿಂದ ಪಡೆದುಕೊಂಡಿದ್ದರು. ರೈಲ್ವೆ ಇಲಾಖೆಯಲ್ಲಿ ಹೊಸದನ್ನು ಮಾಡುವತ್ತ ದಿಟ್ಟ ಹೆಜ್ಜೆಯನ್ನು ಸುರೇಶ ಅಂಗಡಿಯವರು ಇಟ್ಟಿದ್ದರು, ಪಕ್ಷದ ಹಿರಿಯ ನಾಯಕರಾಗಿದ್ದರೂ ಪಕ್ಷದ ಎಲ್ಲ ನಾಯಕರೊಂದಿಗೆ, ಶಾಸಕರು, ಪಕ್ಷದ ಕಾರ್ಯಕರ್ತರೊಂದಿಗೆ ಸದಾ ಬೆರೆಯುತ್ತಿದ್ದರು. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ನಾಯಕರಾಗಿದ್ದರು ಅವರ ನಿಧನ ನನಗೆ ತುಂಬಾ ದುಃಖ ತಂದಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಪಿ.ಎಚ್.ಪೂಜಾರ ಸಂತಾಪ : ಪಕ್ಷದ ಹಿರಿಯ ನಾಯಕರು ಕೇಂದ್ರ ರೈಲ್ವೆ ಮಂತ್ರಿಗಳಾದ ಸಂಸದ ಸುರೇಶ ಅಂಗಡಿಯವರ ನಿಧನ ಆಘಾತ ತಂದಿದೆ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಪಿ.ಎಚ್.ಪೂಜಾರ ತಿಳಿಸಿದ್ದಾರೆ.
ಸುರೇಶ ಅಂಗಡಿಯವರು ಒಬ್ಬ ಮಂತ್ರಿಯಾಗಿದ್ದರೂ ಜನರ ಹತ್ತಿರವೇ ಹೆಚ್ಚು ಇರುವ ಮೂಲಕ ಜನಮುಖಿ ಮಂತ್ರಿಯಾಗೆ ಕೆಲಸ ಮಾಡುತ್ತಿದ್ದರು. ಅವರ ನಿಧನ ತುಂಬ ನೋವು ತಂದಿದೆ ಎಂದರು.
ನಾಯಕನನ್ನು ಕಳೆದುಕೊಂಡಿವೆ : ಸಂಸದ ಸುರೇಶ ಅಂಗಡಿಯವರು ಒಬ್ಬ ಸಂಘಟನಾ ಚತುರರು ಹಾಗೂ ಸದಾ ಜನರ ಮಧ್ಯೆ ಇರುವ ಹಿರಿಯ ನಾಯಕನನ್ನು ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ ಎಂದು ಬಾಗಲಕೋಟೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದ್ದಾರೆ.
ಪಕ್ಷದ ಸಂಘಟನೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ನಾಯಕರಾಗಿದ್ದರು. ಪಕ್ಷದ ಬೆಳವಣಿಗೆಗೆ ಅವರ ಸೇವೆ ಇನ್ನಷ್ಟು ಬೇಕಾಗಿತ್ತು. ರೈಲ್ವೆ ಸಚಿವರಾಗಿ ಉತ್ತಮ ಕೆಲಸ ಮಾಡುತ್ತಿದ್ದ ರು.ಪ್ರಧಾನಿ ಮೋದಿಯವರ ಸಂಪುಟದಲ್ಲಿ ಉತ್ತಮ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು ಅವರ ನಿಧನ ದುಃಖ ತಂದಿದೆ ಎಂದರು.
ಕಾರಜೋಳರಿಂದ ತೀವ್ರ ಸಂತಾಪ : ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಅವರ ನಿಧನವಾರ್ತೆ ಕೇಳಿ ಆಘಾತ ಉಂಟಾಗಿದ್ದು, ಅತೀವ ದುಃಖ ತಂದಿದ್ದು, ನಿಧನಕ್ಕೆ ತೀವ್ರ ಸಂತಾಪ ಸೂಚಿಸುವುದಾಗಿ ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ ಅವರು ತಿಳಿಸಿದ್ದಾರೆ.
ಕೇವಲ ಐದು ದಿನಗಳ ಹಿಂದೆ ಇನ್ನೋರ್ವ ಸಹಕಾರಿ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಗಸ್ತಿಯವರನ್ನು ಕಳೆದುಕೊಂಡೆವು. ಇದೀಗ ಮತ್ತೊಂದು ಆಘಾತವುಂಟಾಗಿದೆ. ಸುರೇಶ್ ಅಂಗಡಿಯವರು ಸರಳ ಸಜ್ಜನಿಕೆಯ ವ್ಯಕ್ತಿತ್ವಹೊಂದಿದ್ದರು. ಸಹೃದಯಿಯಾಗಿದ್ದರು. 4 ಬಾರಿ ಸಂಸದರಾಗಿ, ಕೇಂದ್ರ ರೈಲ್ವೆ ರಾಜ್ಯಖಾತೆ ಸಚಿವರಾಗಿ ಅತ್ಯುತ್ತಮ ವಾಗಿ ಕಾರ್ಯನಿರ್ವಹಿಸಿದ್ದಾರೆ. ಅಭಿವೃದ್ಧಿ ಪರವಾಗಿದ್ದರು. ಬಿಜೆಪಿ ಪಕ್ಷದ ಏಳಿಗೆಗಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಅವರ ಅಗಲಿಕೆಯಿಂದ ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬ ಪರಿವಾರದವರಿಗೆ ಹಾಗೂ ಅನುಯಾಯಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಿ, ಮೃತರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಡಿಸಿಎಂ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.