ಹೊಸದಿಲ್ಲಿ: ಕೇಂದ್ರ ಸರ್ಕಾರ ತನ್ನ ನೌಕರರಿಗೆ ಸಿಹಿ ಸುದ್ದಿ ನೀಡಿದ್ದು, ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಶೇ.4ರಷ್ಟು ಹೆಚ್ಚಿಸಲು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಹೆಚ್ಚಳವು ಈ ವರ್ಷದ ಜ.1 ರಿಂದಲೇ ಪೂರ್ವಾನ್ವಯವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.4ರಷ್ಟು ಹೆಚ್ಚಿಸಲು ಸಂಪುಟ ತೀರ್ಮಾನಿಸಿದೆ. ತುಟ್ಟಿಭತ್ಯೆ ಹೆಚ್ಚಳದಿಂದ ಸರ್ಕಾರಕ್ಕೆ ಹೆಚ್ಚುವರಿಯಾಗಿ 14,595 ಕೋಟಿ ರೂ. ಖರ್ಚಾಗಲಿದೆ ಎಂದರು. ಸದ್ಯ ಶೇ.17 ರಷ್ಟು ಇರುವ ತುಟ್ಟಿಭತ್ಯೆಯನ್ನು ಈಗ ಶೇ.21ಕ್ಕೆ ಹೆಚ್ಚಿಸಲಾಗಿದ್ದು, ಇದ ರಿಂದ 50 ಲಕ್ಷ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಅನುಕೂಲ ಆಗಲಿದೆ.