ಹೊಸದಿಗಂತ ವರದಿ, ದಾವಣಗೆರೆ:
2020-21ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ದಾವಣಗೆರೆಯಲ್ಲಿ ರೈಲ್ವೆ ಮ್ಯೂಸಿಯಂ ಸ್ಥಾಪನೆ ಮಾಡಲು ಅಗತ್ಯ ಅನುದಾನ ಮೀಸಲಿಡುವಂತೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ರೈಲ್ವೆ ಮಂಡಳಿ ಅಧ್ಯಕ್ಷ ಸನೀತ್ ಶರ್ಮಾ ಅವರುಗಳಿಗೆ ಸಂಸದ ಜಿ.ಎಂ.ಸಿದ್ದೇಶ್ವರ ಮನವಿ ಮಾಡಿದ್ದಾರೆ.
ರೈಲ್ವೆ ಮ್ಯೂಸಿಯಂ ಸ್ಥಾಪನೆ ಮಾಡಲು ಅಗತ್ಯವಾದ ಜಾಗ ಲಭ್ಯವಿದ್ದು, ಹೊಸ ರೈಲ್ವೆ ನಿಲ್ದಾಣದ ಜೊತೆಗೆ ಮ್ಯೂಸಿಯಂ ಸ್ಥಾಪನೆಯಿಂದ ನಗರಕ್ಕೆ ಮೆರಗು ಸಿಗಲಿದೆ. ಇದಲ್ಲದೆ, ಹರಿಹರ ನಗರದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು. ತೋಳಹುಣಸೆ ಬಳಿ ಬೀರೂರು-ಸಮ್ಮಸಗಿ ಹೆದ್ದಾರಿಯ ಸೇತುವೆ ಕೆಳಗಡೆ ಸಬ್ವೇ ನಿರ್ಮಿಸಬೇಕು. ಹೊಸಪೇಟೆ-ಕೊಟ್ಟೂರು ಪ್ಯಾಸೆಂಜರ್ ರೈಲನ್ನು ಅರಸೀಕೆರೆ/ ಚಿಕ್ಕಮಗಳೂರುವರೆಗೆ ವಿಸ್ತರಿಸಬೇಕು. ವಾರದಲ್ಲಿ ಮೂರು ಬಾರಿ ದಾವಣಗೆರೆ ಮಾರ್ಗವಾಗಿ ಯಶವಂತಪುರ-ಪುಣೆಗೆ ಹೊಸ ರೈಲು ಓಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಗರದ ರೈಲ್ವೆ ನಿಲ್ದಾಣದಲ್ಲಿ ರಿಸರ್ವೇಶನ್ ಕೌಂಟರ್ ಹೆಚ್ಚಿಸುವ ಜೊತೆಗೆ ಎಕ್ಸ್ಪ್ರೆಸ್ ಹಾಗೂ ಪ್ಯಾಸೆಂಜರ್ ಟ್ರೈನ್ಗಳ ನಿಲುಗಡೆ ಸಮಯವನ್ನು 2 ನಿಮಿಷದಿಂದ 3 ನಿಮಿಷಕ್ಕೆ ಹೆಚ್ಚಳ ಮಾಡಬೇಕು. ವಾರದಲ್ಲಿ ಮೂರು ದಿನ ದಾವಣಗೆರೆ, ಅರಸೀಕೆರೆ, ಹಾಸನ ಮಾರ್ಗವಾಗಿ ಹುಬ್ಬಳ್ಳಿ-ಮಂಗಳೂರು ಟ್ರೈನ್ ಓಡಿಸಬೇಕು. ವಿಶೇಷವಾಗಿ ಜೈನ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಮೈಸೂರುನಿಂದ ಪಾಲಿತಾನವರೆಗೆ ದಾವಣಗೆರೆ-ಹುಬ್ಬಳ್ಳಿ ಮಾರ್ಗವಾಗಿ ಹೊಸ ಟ್ರೈನ್ ಓಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅರಸೀಕೆರೆ-ದಾವಣಗೆರೆ-ಹುಬ್ಬಳ್ಳಿ ಮಾರ್ಗವಾಗಿ ಬೆಂಗಳೂರು-ಮುಂಬೈ ಹಾಗೂ ಮೈಸೂರು-ಅಜ್ಮೀರ್ವರೆಗೆ ಸುವಿಧಾ ಟ್ರೈನ್ಗಳನ್ನು ಓಡಿಸಬೇಕು. ಬಾಣಾವರ-ಅರಸೀಕೆರೆ-ದಾವಣಗೆರೆ-ಹುಬ್ಬಳ್ಳಿ ನಡುವೆ ರೈಲ್ವೆ ಲೈನ್ ವಿದ್ಯುದೀಕರಣ ಕಾಮಗಾರಿಯನ್ನು ಚುರುಕುಗೊಳಿಸಬೇಕು. ಬೆಂಗಳೂರು-ಗಾಂಧಿದಾಮ್ ಮತ್ತು ಜೋಧ್ಪುರ್ ಎಕ್ಸ್ಪ್ರೆಸ್ ಟ್ರೈನನ್ನು ವಾರದಲ್ಲಿ ಮೂರು ದಿನ ಓಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.