ಹೊಸ ದಿಗಂತ ವರದಿ, ಮಂಗಳೂರು:
ಕೇಂದ್ರ ವಿತ್ತ ಸಚಿವರು ಮಂಡಿಸಿದ ಬಜೆಟ್ ಸೇಲ್ ಇಂಡಿಯಾ ಮತ್ತು ಲೂಟ್ ಇಂಡಿಯಾ ಬಜೆಟ್ ಆಗಿದೆ. ಜನರ ಮೇಲೆ
ಇಲ್ಲಸಲ್ಲದ ತೆರಿಗೆಗಳನ್ನು ಹಾಕಿ ಲೂಟಿ ಮಾಡಿ ಆಡಳಿತ ನಡೆಸಲು ಹೊರಟಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ತೆರಿಗೆ ಹೆಚ್ಚಿಸಿದ್ದರಿಂದ
ಎಲ್ಲ ದೈನಂದಿನ ವಸ್ತುಗಳ ಬೆಲೆಗಳು ವಿಪರೀತ ಏರಿಕೆಯಾಗಿವೆ ಎಂದು ಶಾಸಕ ಯು.ಟಿ.ಖಾದರ್ ಟೀಕಿಸಿದರು.
ಕೇಂದ್ರ ಸರಕಾರ ಮಂಡಿಸಿದ ಬಜೆಟ್ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಯಾವೊಂದು ಯೋಜನೆಯನ್ನೂ ರಾಜ್ಯಕ್ಕೆ ಮತ್ತು
ಕರಾವಳಿಗೆ ನೀಡಿಲ್ಲ. ರಾಜ್ಯದ ಬಿಜೆಪಿ ಸಂಸದರು ಬಾಯಿಗೆ ಬೀಗ ಹಾಕಿ ಕೂತಿದ್ದರಿಂದಲೇ ಜನರಿಗೆ ಅನ್ಯಾಯ ಆಗಿದೆ ಎಂದು
ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಕೊರೋನಾದಿಂದಾಗಿ ರಾಜ್ಯದ ಜನತೆ ಕಂಗೆಟ್ಟಿರುವಾಗ ತೆರಿಗೆ ಹೆಚ್ಚಿಸಿ ಶೋಷಣೆ ಮಾಡಲಾಗುತ್ತಿದೆ. ಚುನಾವಣೆ ನಡೆಯುತ್ತಿರುವ ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಭಾರತ ಒಂದು ಎನ್ನುತ್ತಾರೆ. ಆದರೆ ಒಂದು ದೇಶ ಒಂದು ಬಜೆಟ್ ಏಕಿಲ್ಲ? ನಮ್ಮ ರಾಜ್ಯದವರು ಏನು ಭಾರತೀಯರಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರ ತವರೂರು ಕರಾವಳಿ ಜಿಲ್ಲೆಗಳಿಗೆ ಒಂದು ಸಣ್ಣ ಯೋಜನೆಯನ್ನೂ ಘೋಷಣೆ ಮಾಡದೆ ಇದ್ದಾಗ ಇವರು ಏಕೆ ಮಾತನಾಡಲಿಲ್ಲ? ರಾಜ್ಯದ ಎಲ್ಲ ಸಂಸದರು ಪಾರ್ಲಿಮೆಂಟ್ನಲ್ಲಿ ಮಾತನಾಡಿ ಸಪ್ಲಿಮೆಂಟರಿ ಬಜೆಟ್ನಲ್ಲಿ ದ.ಕ. ಜಿಲ್ಲೆ ಮತ್ತು ರಾಜ್ಯದ ಜನರಿಗೆ ನ್ಯಾಯ ಕೊಡಲಿ ಎಂದು ಆಗ್ರಹಿಸಿದರು.