ಧಾರವಾಡ: ಪೆಟ್ರೋಲ್-ಡಿಸೈಲ್ ಬೆಲೆ ಏರಿಕೆ ಹಾಗೂ ರಾಜ್ಯ-ಕೇಂದ್ರ ಸರ್ಕಾರಗಳ ಜನ ವಿರೋಧಿ ನೀತಿ ಖಂಡಿಸಿ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಚಕ್ಕಡಿ ಮೆರವಣಿಗೆ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.
ರಾಜ್ಯ-ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಇಲ್ಲಿನ ಗಾಂಧಿ ನಗರದಿಂದ ಆರಂಭಗೊಂಡ ಚಕ್ಕಡಿ ಮೆರವಣಿಗೆ ಏಲಕ್ಕಿ ಶೆಟ್ಟರ್ ಕಾಲೋನಿ, ಕೆಎಂಎಫ್ ಮಾರ್ಗದ ಮೂಲಕ ನವಲೂರಿನ ಮಯೂರ್ ರೇಸಾರ್ಟ್ ಬಳಿಯಲ್ಲಿ ಸಮಾಪ್ತಿಗೊಂಡಿತು.
ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡುವುದರಿಂದ ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ. ತಕ್ಷಣವೇ ಪೆಟ್ರೋಲ್-ಡಿಸೈಲ್ ಬೆಲೆ ಇಳಿಕೆ ಮಾಡುವಂತೆ ಹಾಗೂ ಮಳೆಯಿಂದ ಹಾನಿಗೆ ಒಳಗಾದ ರೈತರಿಗೆ-ಸಾರ್ವಜನಿಕರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ, ಕೆಪಿಸಿಸಿ ಕಾರ್ಯದರ್ಶಿ ನಾಗರಾಜ ಗೌರಿ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದೀಪಾ ಗೌರಿ, ಇಸ್ಮಾಯಿಲ್ ತಮಟಗಾರ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.