ಉಡುಪಿ: ಜಿಲ್ಲೆಯ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟ್ಟು ಗ್ರಾಮದಲ್ಲಿ ನೇಕಾರಿಕೆ ಮಾಡುತ್ತಿದ್ದ ಲಕ್ಷ್ಮಣ ಶೆಟ್ಟಿಗಾರ್ ಅವರಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹಾಯ ಮಾಡಿದ್ದು, ನೆರೆ ನೀರು ತುಂಬಿದ 24 ತಾಸುಗಳಲ್ಲಿ ಆಡಳಿತ ಯಂತ್ರ ಸ್ಪಂದಿಸಿದೆ. ಇದೇ ರೀತಿಯ ಸ್ಪಂದನೆಯ ನಿರೀಕ್ಷೆಯಲ್ಲಿ ಪಿನಾಕಿನಿ ಹೊಳೆಯ ಮಡಿಲಲ್ಲಿರುವ ಮಟ್ಟು ಗ್ರಾಮವಿದೆ.
ಐದುವರೆ ದಶಕಗಳಿಂದ ಕೈಮಗ್ಗ ನೇಕಾರಿಕೆಯಲ್ಲಿ ತೊಡಗಿರುವ ಲಕ್ಷ್ಮಣ ಶೆಟ್ಟಿಗಾರ್ ಮನೆಯಲ್ಲಿರುವ ಕೈಮಗ್ಗದ ಶೆಡ್ಗೆ ನೆರೆ ನೀರು ನುಗ್ಗಿ ಸಮಸ್ಯೆಯಾಗಿತ್ತು. ಈ ಚಿತ್ರ ಸಾಮಾಜಿಕ ಜಾಲತಾಣದ ಮೂಲಕ ಸಚಿವೆ ಸ್ಮೃತಿ ಇರಾನಿಗೆ ಗಮನಕ್ಕೆ ಬಂದಿದೆ. ತಕ್ಷಣ ಸ್ಪಂದಿಸಿದ ಸಚಿವೆ, ಕೇಂದ್ರ ಜವಳಿ ಸಚಿವಾಲಯದ ಬೆಂಗಳೂರು ನೇಕಾರರ ಸೇವಾ ಕೇಂದ್ರಕ್ಕೆ ಸೂಚನೆ ನೀಡಿದ್ದಾರೆ. ಅದರಂತೆ ಶೆಟ್ಟಿಗಾರ್ ಅವರ ಮನೆಗೆ ಭೇಟಿ ನೀಡಿದ ಕೇಂದ್ರದ ಅಧಿಕಾರಿಗಳು, ಹಾನಿ ಪರಿಶೀಲಿಸಿದ್ದಾರೆ. ತಕ್ಷಣ ಸ್ಥಳದಲ್ಲಿಯೇ 1.20 ಲಕ್ಷ ರೂ.ಗಳ ಅನುದಾನ ಮಂಜೂರು ಮಾಡಿ, ಕೈಮಗ್ಗಕ್ಕೆ ಮನೆಯ ಪಕ್ಕದಲ್ಲಿಯೇ ಶೆಡ್ ನಿರ್ಮಿಸಲು ಸೂಚಿಸಿದ್ದಾರೆ.
ಗ್ರಾಮದಲ್ಲಿ ಐದು ಮನೆಗಳು ಧರಾಶಾಹಿ
ಇಷ್ಟು ಶೀಘ್ರವಾಗಿ ಸ್ಪಂದಿಸಿದ ಸರಕಾರ, ಗ್ರಾಮದ ಇನ್ನಷ್ಟು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕಿದೆ. ಪಿನಾಕಿನಿ ಹೊಳೆ ಉಕ್ಕಿ ಹರಿದ ಪರಿಣಾಮ ಗ್ರಾಮದಲ್ಲಿ ಸುಮಾರು 8 ದಶಕಗಳ ಬಳಿಕ ಗ್ರಾಮಕ್ಕೆ ಗ್ರಾಮವೇ ಮುಳುಗಡೆಯಾಗಿತ್ತು. ಮಟ್ಟು ಗ್ರಾಮದ ಶೇ. 95ರಷ್ಟು ಜನರು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರವಾಗಿದ್ದರು. ಬಹುತೇಕ ಎಲ್ಲ ಮನೆಗಳೊಳಗೆ ನೆರೆ ನೀರು ನುಗ್ಗಿತ್ತು. ನೆರೆ ಇಳಿದ ನಂತರ ಮಟ್ಟು ಗ್ರಾಮವೊಂದರಲ್ಲೇ ಐದು ಮನೆಗಳು ಧರಾಶಾಹಿಯಾಗಿವೆ. ಮಟ್ಟು ಅಳಿಂಜೆ ದೇವರ ಕುದ್ರುವಿನಲ್ಲಿ ಎರಡು, ಅಣೆಕಟ್ಟು ಬದಿಯಲ್ಲಿ, ಮಟ್ಟುವಿನಲ್ಲಿ ಮತ್ತು ಅಳಿಂಜೆಯಲ್ಲಿ ತಲಾ ಒಂದು ಹಾಗೂ ಕೋಟೆ ಗ್ರಾಮದಲ್ಲಿ ಒಂದು ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಕೋಟೆ ಗ್ರಾಮದಲ್ಲಿ ಒಂದು ಮತ್ತು ಮಟ್ಟುವಿನಲ್ಲಿ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಮಟ್ಟು ಗ್ರಾಮದಲ್ಲಿ ಮಾತ್ರ ಬೆಳೆಯುವ ಪ್ರಾದೇಶಿಕ ಗುರುತಿಸುವಿಕೆ ಪ್ರಮಾಣಪತ್ರವನ್ನು ಹೊಂದಿರುವ ಮಟ್ಟುಗುಳ್ಳ ಬೆಳೆ ಸಂಪೂರ್ಣ ನಾಶವಾಗಿದೆ. ಆದರೆ ಈವರೆಗೆ ಯಾವುದೇ ಅಧಿಕಾರಿಗಳು ಹಾನಿಯ ಸಮೀಕ್ಷೆ ನಡೆಸಿಲ್ಲ. ಇತ್ತ ಭತ್ತದ ಕೃಷಿಗೂ ಹಾನಿಯಾಗಿದ್ದು, ಇದರ ಸಮೀಕ್ಷೆಯೂ ಇನ್ನಷ್ಟೇ ಆಗಬೇಕಿದೆ. ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದ ಪ್ರಮಾಣ ಲೆಕ್ಕಕ್ಕೇ ಸಿಕ್ಕಿಲ್ಲ.
ಗ್ರಾಮದಲ್ಲಿ ಮನೆ ಕುಸಿದು ಸಂತ್ರಸ್ತರಾದವರು ಅವುಗಳ ಅವಶೇಷಗಳ ತೆರವು ಕಾರ್ಯದಲ್ಲಿ ತೊಡಗಿದ್ದಾರೆ.
ಕೇಂದ್ರ ಸಚಿವ ಸ್ಮೃತಿ ಇರಾನಿ ಅವರ ಶೀಘ್ರ ಸ್ಪಂದನೆಯ ಮೂಲಕ ಮಟ್ಟು ಗ್ರಾಮವೀಗ ಎಲ್ಲರ ಗಮನ ಸೆಳೆದಿದೆ. ಮಾತ್ರವಲ್ಲ ಸುದ್ದಿಯಲ್ಲಿಯೂ ಇದೆ. ಇದೇ ಮಟ್ಟು ಗ್ರಾಮದಲ್ಲಿ ಇನ್ನಷ್ಟು ಸಂತ್ರಸ್ತರಿದ್ದಾರೆ. ಅವರ ಸಮಸ್ಯೆಗಳಿಗೆ ಕೂಡ ಅಷ್ಟೇ ವೇಗವಾಗಿ ಸ್ಪಂದನೆ ಸಿಗಬೇಕಿದೆ. ಈ ಮೂಲಕ ಸರಕಾರ ಸಂತ್ರಸ್ತರ ನೆರವಿದೆ ಧಾವಿಸುವ ಆವಶ್ಯಕತೆ ಇದೆ.