ಹೊಸದಿಲ್ಲಿ : ಕೊರೋನಾ ವೈರಸ್ ಪಿಡುಗಿನ ವಿರುದ್ಧ ಕೇಂದ್ರ ಸರಕಾರ ಇನ್ನಷ್ಟು ಆರ್ಥಿಕ ಉಪಕ್ರಮಗಳ ಘೋಷಣೆ ಮಾಡಿರುವಂತೆಯೇ, ದೇಶದ ಶೇರು ಮಾರುಕಟ್ಟೆಯಲ್ಲೂ ಭಾರೀ ಚೇತರಿಕೆ ಕಂಡುಬಂದಿದೆ.ಗುರುವಾರ ಮುಂಬೈ ಶೇರು ಮಾರುಕಟ್ಟೆಯಲ್ಲಿ ೧,೨೬೬ ಅಂಕ (ಶೇ.೪.೨೩)ಗಳಷ್ಟು ಏರಿಕೆ ದಾಖಲಾಗಿ, ೩೧,೧೬೦ಕ್ಕೆ ತಲುಪಿತು.
ಆಟೋ ಮತ್ತು ವಿತ್ತೀಯ ಕ್ಷೇತ್ರಗಳ ಶೇರುಗಳು ಏರಿಕೆ ದಾಖಲಿಸಿದ್ದು ವಿಶೇಷವಾಗಿತ್ತು.ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಕೂಡಾ ೩೫೪ಅಂಕಗಳಷ್ಟು ಏರಿ ೯,೧೦೩ಕ್ಕೆ ತಲುಪಿತು.ಮಹೀಂದ್ರಾ ಅಂಡ್ ಮಹೀಂದ್ರಾ, ಮಾರುತಿ, ಟೈಟಾನ್, ಎಚ್ಡಿಎಫ್ಸಿ, ಬಜಾಜ್ ಫೈನಾನ್ಸ್, ಬಜಾಜ್ ಆಟೋಗಳು ಶೇ.೧೭.೫೬ರಷ್ಟು ಏರಿಕೆ ದಾಖಲಿಸಿದರೆ, ನಿಫ್ಟಿಯಲ್ಲೂ ಆಟೋಮೊಬೈಲ್ ಮತ್ತು ಹಣಕಾಸು ಸೇವಾ ಸಂಸ್ಥೆಗಳ ಶೇರುಗಳು ಮೇಲಕ್ಕೇರಿದ್ದು ಗಮನ ಸೆಳೆಯಿತು.
ಪ್ರಧಾನಿ ನರೇಂದ್ರ ಮೋದಿ ಸರಕಾರವು ಮುಂಬರುವ ದಿನಗಳಲ್ಲಿ ಇನ್ನೊಂದು ಪ್ಯಾಕೇಜ್ ಘೋಷಿಸಲಿದ್ದು ಇದು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳಿಗೆ ಉತ್ತೇಜನ ತುಂಬಲಿದೆ ಎಂದು ನಿರೀಕ್ಷಿಸಲಾಗಿದೆ.