ಹೊಸದಿಲ್ಲಿ: ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಭಾರತೀಯ ಮಕ್ಕಳ ಕಲ್ಯಾಣ ಮಂಡಳಿಯ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸಂದಿದೆ.
ಇಂದು ಭಾರತೀಯ ಮಕ್ಕಳ ಕಲ್ಯಾಣ ಮಂಡಳಿ ನೀಡುವ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರಕಟವಾಗಿದೆ. ದೇಶದ 22 ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಜ.26ರಂದು ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕರ್ನಾಟಕದಿಂದ ಉತ್ತರ ಕನ್ನಡ ಜಿಲ್ಲೆಯ 9 ವರ್ಷದ ಆರತಿ ಕಿರಣ್ ಶೇಟ್ ಮತ್ತು ರಾಯಚೂರಿನ 11 ವರ್ಷದ ವೆಂಕಟೇಶ್ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಂದಮ್ಮನಿಗೆ ಪುನರ್ಜನ್ಮ ನೀಡಿದ ಆರತಿ: ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ನವೀಲಗೋಣ ಗ್ರಾಮದ ಆರತಿ 2019ರಲ್ಲಿ ಹಸುವಿನ ದಾಳಿಯಿಂದ 2 ವರ್ಷದ ಮಗುವನ್ನು ರಕ್ಷಣೆ ಮಾಡಿದ್ದಳು. ಈಕೆಯ ಸಮಯೋಚಿತ ಕಾರ್ಯದಿಂದಾಗಿ ಮಗುವಿಗೆ ಪುನರ್ಜನ್ಮ ದೊರಕಿತ್ತು. ಕಳೆದ ವರ್ಷ ಆರತಿಗೆ ರಾಜ್ಯ ಸರ್ಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು. ಸದ್ಯ ಆರತಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.
ಪ್ರವಾಹದ ಮಧ್ಯೆಯೂ ಜೀವ ಉಳಿಸಿದ ಬಾಲಕ: 2019ರಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ವೆಂಕಟೇಶ್ ರಸ್ತೆ ಕಾಣದೆ ನಿಂತಿದ್ದ ಆಂಬುಲೆನ್ಸ್ ಗೆ ದಾರಿ ತೋರಿಸುವ ಮೂಲಕ 5 ಮಂದಿಯ ಪ್ರಾಣ ರಕ್ಷಣೆ ಮಾಡಿದ್ದ. ಮೃತ ದೇಹದೊಂದಿಗೆ 5 ಮಂದಿ ಹೊತ್ತಿದ್ದ ಆಂಬುಲೆನ್ಸ್ ಜಾಗಟ್ಕಲ್ ನಿಂದ ಯಾದಗಿರಿ ಕಡೆಗೆ ಹೊರಟಿತ್ತು. ಈ ಸಂದರ್ಭದಲ್ಲಿ ಹಿರೇರಾಯನಕುಂಪಿ ಹಾಗೂ ಗುಂಗಾಲ್ ರಸ್ತೆ ಸಂಪೂರ್ಣ ನೀರಿನಿಂದ ಆವರಿಸಲ್ಪಟ್ಟಿತ್ತು.
ರಾಯಚೂರಿನ ದೇವದುರ್ಗಾ ತಾಲೂಕಿನ ಹಿರೇರಾಯನಕುಂಪಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ವೆಂಕಟೇಶ್ ಕೇಂದ್ರ ಸರ್ಕಾರದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದ ರಾಯಚೂರು ಜಿಲ್ಲೆಯ ಮೊದಲ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಪ್ರತಿ ಪ್ರಶಸ್ತಿಯು 1 ಲಕ್ಷ ರೂ. ನಗದು, 10 ಸಾವಿರ ರೂ. ಮಲ್ಯದ ಬುಕ್ ವೋಚರ್, ಪ್ರಶಸ್ತಿ ಪದಕ ಹಾಗೂ ಪ್ರಮಾಣ ಪತ್ರ ಹೊಂದಿರಲಿದೆ.